ಪತ್ನಿಯ ವರದಷ್ಷಿಣೆ ಸಾವಿಗೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 304 ಬಿ ಅಡಿ ಗಂಡನ ವಿವಾಹೇತರ ಸಂಬಂಧ ಅಥವಾ ಬೆಟ್ಟಿಂಗ್ ವ್ಯಸನದತ್ತ ಬೆರಳು ಮಾಡಲಾಗದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ಪಾರುಲ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಮದುವೆಯಾದ ಎರಡು ವರ್ಷಗಳೊಳಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಗೆ ಜಾಮೀನು ನೀಡುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರ ಮತ್ತೊಂದು ವೈವಾಹಿಕ ಸಂಬಂಧ ಬೆಳೆಸಿರುವುದಾಗಲೀ ಇಲ್ಲವೇ ಬೆಟ್ಟಿಂಗ್‌ನಲ್ಲಿ ತೊಡಗಿರುವುದಾಗಲೀ ಐಪಿಸಿ ಸೆಕ್ಷನ್ 304 ಬಿ ಅಡಿ ಆತನನ್ನು ಸಿಲುಕಿಸಲು ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ನುಡಿದಿದೆ.
ಐಪಿಸಿ ಸೆಕ್ಷನ್ 304 ಬಿ ಅಡಿ ಪ್ರಕರಣ ಹೂಡಲು ಸಾವಿಗಿಂತ "ಸ್ವಲ್ಪ ಸಮಯದ ಮೊದಲು" ಕಿರುಕುಳ ನೀಡರುವುದಷ್ಟೇ ಅಲ್ಲ ಆ ಕಿರುಕುಳ ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದ್ದಾಗಿರಬೇಕು ಎಂದು ನ್ಯಾಯಮೂರ್ತಿ ವಿಕಾಸ್ ಮಹಾಜನ್ ಹೇಳಿದ್ದಾರೆ.
ಮೃತ ಮಹಿಳೆಯ ತಂದೆ ವರದಕ್ಷಿಣೆ ಪ್ರಕರಣ ದಾಖಲಿಸಿದ್ದರೂ ಮಹಿಳೆ ಸಾವಿಗೆ ಮುನ್ನ ಆರೋಪಿ ಭೇಟಿಯಾದಾಗ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿರಲಿಲ್ಲ. ಮಹಿಳೆ ಬದುಕಿದ್ದಾಗ ವರದಕ್ಷಿಣೆ ಕಿರುಕುಳ ಕುರಿತು ಪ್ರಕರಣ ದಾಖಲಿಸಿದ್ದರೂ ಅದು ಆಕೆ ತನ್ನ ವೈವಾಹಿಕ ಗೃಹವನ್ನು ತೊರೆಯುವುದಕ್ಕೂ ಮುನ್ನ ದಾಖಲಿಸಿದುದಾಗಿತ್ತು ಎಂದು ಪೀಠ ಹೇಳಿದೆ.
ಆನಂತರ ಆರೋಪಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದನ್ನು ವಿವರಿಸುವ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ. ಗಮನಾರ್ಹ ಅಂಶವೆಂದರೆ ಮಹಿಳೆ ಉದ್ವಿಗ್ನತೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ ಪ್ರಕರಣದ ಪ್ರಸ್ತುತ ಹಂತದಲ್ಲಿ ನಿರಪರಾಧಿ ಎಂದು ಭಾವಿಸಲು ಆರೋಪಿ ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ನುಡಿದಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]