ಟ್ವಿಟರ್‌ ಖಾತೆ ಅಮಾನತು: ಇಲಾನ್ ಮಸ್ಕ್‌ ಪಕ್ಷಕಾರರನ್ನಾಗಿಸಲು ಕೋರಿಕೆ; ₹25 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್‌

ಟ್ವಿಟರ್‌ ಅನ್ನು ಈಗಾಗಲೇ ಪ್ರತಿವಾದಿಯಾಗಿಸಲಾಗಿದ್ದು, ತಪ್ಪಾಗಿ ಅರ್ಜಿ ಸಲ್ಲಿಸಲಾಗಿದೆ. ಇಲಾನ್‌ ಮಸ್ಕ್‌ ಅವರನ್ನು ಪ್ರತಿವಾದಿಯನ್ನಾಗಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
Elon musk and Twitter logo
Elon musk and Twitter logowikipedia

ಟ್ವಿಟರ್‌ ಖಾತೆ ನಿಷೇಧಿಸಿರುವ ಪ್ರಕರಣದಲ್ಲಿ ಟ್ವಿಟರ್‌ ಮಾಲೀಕ ಹಾಗೂ ಉದ್ಯಮಿ ಇಲಾನ್‌ ಮಸ್ಕ್‌ ಅವರನ್ನು ಪ್ರತಿವಾದಿಯಾಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಡಿಂಪಲ್‌ ಕೌಲ್‌ ಅವರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ₹25,000 ದಂಡ ವಿಧಿಸಿದೆ.

ಟ್ವಿಟರ್‌ ಅನ್ನು ಈಗಾಗಲೇ ಪ್ರತಿನಿಧಿಸಲಾಗಿದೆ ಎಂದು ಹೇಳಿ ನ್ಯಾಯಮೂರ್ತಿ ಯಶವಂತ್‌ ವರ್ಮಾ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ವಜಾ ಮಾಡಿತು.

“ತಪ್ಪಾಗಿ ಭಾವಿಸಿ ಅರ್ಜಿ ಸಲ್ಲಿಸಲಾಗಿದೆ. ಟ್ವಿಟರ್‌ ಅನ್ನು ಈಗಾಗಲೇ ಪ್ರತಿನಿಧಿಸಿರುವಾಗ ಈ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರಲಿಲ್ಲ. ₹25 ಸಾವಿರ ದಂಡ ವಿಧಿಸಿ ಅರ್ಜಿ ವಜಾ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಇಲಾನ್‌ ಮಸ್ಕ್‌ ಅವರನ್ನು ಪ್ರತಿವಾದಿಯನ್ನಾಗಿಸಬೇಕು ಎಂದು ಕೋರಿದ್ದ ಅರ್ಜಿಗೆ ಟ್ವಿಟರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ತೀವ್ರ ವಿರೋಧ ದಾಖಲಿಸಿದರು. ಕೌಲ್‌ ಸಲ್ಲಿಸಿದ್ದ ಅರ್ಜಿಯಲ್ಲಿ ಮಸ್ಕ್‌ ಅವರನ್ನು ಪ್ರತಿವಾದಿಯಾಗಿಸಲು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಮಸ್ಕ್‌ ಅವರು ಟ್ವಿಟರ್‌ಅನ್ನು ಖರೀದಿಸಿದ್ದು, ಅದರ ಷೇರುಗಳನ್ನು ಸಹ ನ್ಯೂಯಾರ್ಕ್‌ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿಲ್ಲಎಂದು ವಕೀಲ ಮುಕೇಶ್‌ ಶರ್ಮಾ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು, ವಕೀಲ ರಾಘವ್‌ ಅವಸ್ಥಿ ಅವರು ವಾದಿಸಿದ್ದರು.

ವಾಕ್‌ ಸ್ವಾತಂತ್ರ್ಯದ ಕುರಿತು ಮಸ್ಕ್‌ ಭಿನ್ನ ನಿಲುವು ಹೊಂದಿದ್ದು, ಸಂಬಂಧಪಟ್ಟ ದೇಶದ ಕಾನೂನನ್ನು ವಾಕ್‌ ಸ್ವಾತಂತ್ರ್ಯ ಉಲ್ಲಂಘಿಸದಿದ್ದರೆ ಟ್ವಿಟರ್‌ ಸಹ ಅದನ್ನು ಮೊಟಕುಗೊಳಿಸಬಾರದು ಎಂದು ಮಸ್ಕ್‌ ಹೇಳಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com