ವಿಪಕ್ಷ ಒಕ್ಕೂಟಕ್ಕೆ ʼಇಂಡಿಯಾʼ ಹೆಸರು ಬಳಕೆ: 26 ರಾಜಕೀಯ ಪಕ್ಷಗಳು, ಆಯೋಗಕ್ಕೆ ದೆಹಲಿ ಹೈಕೋರ್ಟ್‌ನಿಂದ ನೋಟಿಸ್‌

ಪ್ರತಿಪಕ್ಷಗಳು ತಮ್ಮ ಒಕ್ಕೂಟಕ್ಕೆ ದೇಶದ ಹೆಸರು ಇಡುವ ಮೂಲಕ ಎನ್‌ಡಿಎ/ಬಿಜೆಪಿ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ತಮ್ಮ ದೇಶದ ಜೊತೆಗೆ ಸಂಘರ್ಷಕ್ಕೆ ಇಳಿದಿದ್ದಾರೆ ಎಂಬುದು ಬಿಂಬಿಸಲು ಯತ್ನಿಸಿವೆ ಎಂದು ಆಕ್ಷೇಪ.
Delhi high court
Delhi high court
Published on

ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಇಂಡಿಯಾ) ಎಂದು ಹೆಸರಿಟ್ಟಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ 26 ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗಕ್ಕೆ ಶುಕ್ರವಾರ ದೆಹಲಿ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರದ್ವಾಜ್‌ ಅವರ ಮೂಲಕ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ಸಂಜೀವ್‌ ನರುಲಾ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ವಕಾಲತ್ತು ವಹಿಸಿರುವ ವಕೀಲ ವೈಭವ್‌ ಸಿಂಗ್‌ ಪರವಾಗಿ ವಾದಿಸಿದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು “ವಿರೋಧ ಪಕ್ಷಗಳು ತಮ್ಮ ಸ್ವಹಿತಾಸಕ್ತಿಗಾಗಿ ಇಂಡಿಯಾದ ಹೆಸರು ಬಳಕೆ ಮಾಡುತ್ತಿವೆ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ, ಪಾರದರ್ಶಕ ಮತ್ತು ನ್ಯಾಯಯುತ ಮತದಾನಕ್ಕೆ ಅಡ್ಡಿಯಾಗುತ್ತದೆ. ಇದು ಜನರನ್ನು ಅನಗತ್ಯ ಹಿಂಸಾಚಾರಕ್ಕೆ ನೂಕಲಿದ್ದು, ದೇಶದ ಕಾನೂನು ಮತ್ತು ಸುವ್ಯವಸ್ಥೆ ಅಡ್ಡಿಯಾಗುತ್ತದೆ. ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ನಿಷೇಧ) ಕಾಯಿದೆ 1950ರ ಸೆಕ್ಷನ್‌ 2 ಮತ್ತು 3ರ ಇಂಡಿಯಾ ಹೆಸರು ಬಳಕೆಗೆ ನಿಷೇಧವಿದೆ” ಎಂದು ವಾದಿಸಿದರು.

ಮುಂದುವರಿದು, “ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆ ಉಲ್ಲೇಖಿಸಿ, ಈ ಇಬ್ಬರೂ ನಾಯಕರು ತಮ್ಮ ಒಕ್ಕೂಟಕ್ಕೆ ದೇಶದ ಹೆಸರು ನೀಡಿದ್ದಾರೆ. ಈ ಮೂಲಕ ಎನ್‌ಡಿಎ/ಬಿಜೆಪಿ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ತಮ್ಮ ದೇಶದ ವಿರುದ್ದವೇ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಾರೆ” ಎಂದು ಆಕ್ಷೇಪಿಸಿದರು.

ಮುಂದಿನ ಲೋಕಸಭಾ ಚುನಾವಣೆಯು ಎನ್‌ಡಿಎ ಒಕ್ಕೂಟ ಮತ್ತು ದೇಶದ (ಇಂಡಿಯಾ) ನಡುವಿನ ಹೋರಾಟ ಎಂದು ರಾಹುಲ್‌ ಗಾಂಧಿ ಅವರು ಹೇಳಿದ್ದು, ಇದು ಸಾಮಾನ್ಯ ಜನರಲ್ಲಿ ಗೊಂದಲ ಉಂಟು ಮಾಡಿದೆ. ಈ ಸಂಬಂಧ ಭಾರತೀಯ ಚುನವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಆಯೋಗವು ಯಾವುದೇ ಕ್ರಮಕೈಗೊಳ್ಳದಿರುವುದರಿಂದ ನ್ಯಾಯಾಲಯದ ಕದತಟ್ಟಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

Kannada Bar & Bench
kannada.barandbench.com