ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಅಲೋಪತಿ, ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತಿತರ ವೈದ್ಯಕೀಯ ಪದ್ದತಿಗಳನ್ನು ಒಳಗೊಳ್ಳುವ ಕ್ರೋಢೀಕೃತವಾದ ಸಮಗ್ರ ಸಾಮಾನ್ಯ ಪಠ್ಯಕ್ರಮ ರೂಪಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಸಂವಿಧಾನದ ಅಡಿಯಲ್ಲಿ ಖಾತರಿಪಡಿಸುವ ಆರೋಗ್ಯದ ಹಕ್ಕನ್ನು ಪಡೆಯಲು ವಸಾಹತುಶಾಹಿ ಕಾಲದ ಅನ್ಯ ವಿಧಾನಕ್ಕಿಂತಲೂ ಭಾರತೀಯ ಸಮಗ್ರ ಔಷಧೀಯ ವಿಧಾನ ಅಳವಡಿಸಿಕೊಳ್ಳುವಂತೆ ಕೋರಿ ಬಿಜೆಪಿ ನಾಯಕ, ಹಿರಿಯ ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು. ದೇಶದ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತಿದ್ದು ಶೇ 52ರಷ್ಟು ಅಲೋಪತಿ ವೈದ್ಯರು ಕೇವಲ ಐದು ರಾಜ್ಯಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಅರ್ಜಿಯ ಮುಂದಿನ ವಿಚಾರಣೆ ಸೆ. 8ಕ್ಕೆ ನಿಗದಿಯಾಗಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.