ಭಾರತ ಕ್ರಿಕೆಟ್ ತಂಡದ ಹೆಸರು ಬದಲಾವಣೆ ಕೋರಿದ್ದ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಈಗಿನ ರಾಷ್ಟ್ರೀಯ ಕ್ರಿಕೆಟ್ ತಂಡ ಬಿಸಿಸಿಐಗೆ ಸೇರಿದ ಕ್ರಿಕೆಟ್ ತಂಡವಾಗಿದ್ದು, ದೇಶವನ್ನು ಪ್ರತಿನಿಧಿಸುವುದಿಲ್ಲ ಎಂದು ವಕೀಲರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಾದಿಸಿತ್ತು.
Indian Cricket Team
Indian Cricket Team Facebook
Published on

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ವಹಿಸುವ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ತಂಡ ಎಂದು ಕರೆಯದಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಅರ್ಜಿದಾರರ ಪರ ವಕೀಲ ರೀಪಕ್ ಕನ್ಸಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿತು.

Also Read
ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಕಾಲ್ತುಳಿತ: ನಿಖಿಲ್‌ ಸೋಸಲೆ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

"ಈ ತಂಡ ಭಾರತವನ್ನು ಪ್ರತಿನಿಧಿಸುವುದಿಲ್ಲ ಎಂದು ನೀವು ಹೇಳುತ್ತಿದ್ದೀರಾ? ಎಲ್ಲೆಡೆ ಹೋಗಿ ಭಾರತವನ್ನು ಪ್ರತಿನಿಧಿಸುವ ಈ ತಂಡ,  ಭಾರತವನ್ನು ಪ್ರತಿನಿಧಿಸುವುದಿಲ್ಲ ಎಂದು ನೀವು ಹೇಳುತ್ತಿದ್ದೀರಾ? ಇದು ಟೀಮ್ ಇಂಡಿಯಾ ಅಲ್ಲವೇ? ಇದು ಟೀಮ್ ಇಂಡಿಯಾ ಅಲ್ಲದಿದ್ದರೆ, ದಯವಿಟ್ಟು ಅದು ಟೀಮ್ ಇಂಡಿಯಾ ಏಕೆ ಅಲ್ಲ ಎಂದು ನಮಗೆ ತಿಳಿಸಿ" ಎಂದು ನ್ಯಾಯಮೂರ್ತಿ ಗೆಡೆಲಾ ತರಾಟೆಗೆ ತೆಗೆದುಕೊಂಡರು.

ಪಿಐಎಲ್ ನ್ಯಾಯಾಲಯದ ಸಮಯ ವ್ಯರ್ಥ ಮಾಡುತ್ತಿದೆ. ರಾಷ್ಟ್ರೀಯ ತಂಡದ ಆಯ್ಕೆ ಸರ್ಕಾರದ ಅಧಿಕಾರಿಗಳಿಂದ ನಡೆಯುವುದೇ? ಕಾಮನ್‌ವೆಲ್ತ್ ಗೇಮ್ಸ್, ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಭಾರತೀಯ ತಂಡಗಳನ್ನು ಸರ್ಕಾರವೇ ಆಯ್ಕೆ ಮಾಡುತ್ತದೆಯೇ? ಹಾಕಿ, ಫುಟ್‌ಬಾಲ್, ಟೆನಿಸ್ ಹೀಗೆ ಯಾವುದೇ ಕ್ರೀಡೆ ಇರಲಿ ಇಂತಹ ಆಯ್ಕೆ ಸರ್ಕಾರದ ಕೆಲಸವಲ್ಲ, ಆ ತಂಡಗಳು ದೇಶವನ್ನು ಪ್ರತಿನಿಧಿಸುತ್ತವೆ ಎಂದು ನ್ಯಾಯಾಲಯ ನುಡಿಯಿತು.

ತಂಡ ಭಾರತದ ಧ್ವಜವನ್ನು ಬಳಸಿದೆ ಎಂದರೆ ಅದು ಕಾನೂನು ಉಲ್ಲಂಘನೆಯಾಗಿದೆ ಎಂದರ್ಥವಲ್ಲ ಎಂಬುದಾಗಿ ಅದು ಹೇಳಿದೆ. "ನಿಮ್ಮ ಮನೆಯಲ್ಲಿ ಧ್ವಜ ಹಾರಿಸಲು ಬಯಸಿದರೆ, ಹಾಗೆ ಮಾಡುವುದನ್ನು ನಿಷೇಧಿಸಬೇಕೆ?"

ಇದಲ್ಲದೆ, ಅಂತಾರಾಷ್ಟ್ರೀಯ ಸಂಸ್ಥೆಗಳು ಕ್ರೀಡೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡುವುದನ್ನು ಬಹುತೇಕ ವಿರೋಧಿಸುತ್ತವೆ ಎಂದು ನ್ಯಾಯಾಲಯ ಒತ್ತಿ ಹೇಳಿತು.

"ಕ್ರೀಡೆಯ ಸಂಪೂರ್ಣ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಐಒಸಿ [ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ] ನಿಯಮಗಳ ಬಗ್ಗೆ ನಿಮಗೆ ಅರಿವಿದೆಯೇ? ಒಲಿಂಪಿಕ್ ಚಾರ್ಟರ್ ಬಗ್ಗೆ ನಿಮಗೆ ತಿಳಿದಿದೆಯೇ? ಒಲಿಂಪಿಕ್ ಚಳವಳಿ? ಹಿಂದೆ, ಕ್ರೀಡೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ನಡೆದಲ್ಲೆಲ್ಲಾ, ಐಒಸಿ ತೀವ್ರವಾಗಿ ಖಂಡಿಸಿದೆ ಎಂದು ನಿಮಗೆ ತಿಳಿದಿದೆಯೇ" ಎಂದ ನ್ಯಾಯಾಲಯ  ಪಿಐಎಲ್ ವಜಾಗೊಳಿಸಿತು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಖಾಸಗಿ ಸಂಸ್ಥೆ ಆಗಿದ್ದು, ತಮಿಳುನಾಡು ಸಹಕಾರಿ ನೋಂದಣಿ ಕಾಯ್ದೆಯಡಿ ನೋಂದಾಯಿತವಾಗಿರುವುದರಿಂದ ಅದು ಭಾರತೀಯ ಸಂವಿಧಾನದ ವಿಧಿ 12ರ ಪ್ರಕಾರ ಪ್ರಭುತ್ವ ಅಥವಾ ಶಾಸನಬದ್ಧ ಸಂಸ್ಥೆಯಲ್ಲ ಎಂದು ಕನ್ಸಾಲ್‌ ವಾದಿಸಿದ್ದರು.

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಬಿಸಿಸಿಐಯನ್ನು ರಾಷ್ಟ್ರೀಯ ಕ್ರೀಡಾ ಮಹಾಸಂಘ ಎಂದು ಗುರುತಿಸಿಲ್ಲ ಮತ್ತು ಅದಕ್ಕೆ ಸರ್ಕಾರದಿಂದ ಯಾವುದೇ ಹಣಕಾಸು ಸಹಾಯವೂ ದೊರೆಯುವುದಿಲ್ಲ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದೆ.  

ಕನ್ಸಾಲ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಬಿಸಿಸಿಐ ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯ್ದೆಯಡಿ ನೋಂದಾಯಿಸಲಾದ ಖಾಸಗಿ ಘಟಕವಾಗಿದ್ದು, ಭಾರತೀಯ ಸಂವಿಧಾನದ 12ನೇ ವಿಧಿಯ ಅರ್ಥದಲ್ಲಿ ಶಾಸನಬದ್ಧ ಸಂಸ್ಥೆ ಅಥವಾ ಸರ್ಕಾರವಲ್ಲ ಎಂದು ವಾದಿಸಿತು.

ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್‌ಎಸ್‌ಎಫ್) ಎಂದು ಗುರುತಿಸಲ್ಪಟ್ಟಿಲ್ಲ ಅಥವಾ ಸರ್ಕಾರದಿಂದ ಆರ್ಥಿಕವಾಗಿ ಬೆಂಬಲಿತವಾಗಿಲ್ಲ ಎಂದು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಹಲವಾರು ಉತ್ತರಗಳ ಮೂಲಕ ಸ್ಪಷ್ಟಪಡಿಸಿದೆ. ಆದರೂ ಸರ್ಕಾರದ ಮಾಧ್ಯಮ ವೇದಿಕೆಗಳು ಬಿಸಿಸಿಐ ತಂಡವನ್ನು ಟೀಂ ಇಂಡಿಯಾ ಇಲ್ಲವೇ ಭಾರತೀಯ ರಾಷ್ಟ್ರೀಯ ತಂಡ ಎಂದು ಕರೆಯುತ್ತಿದ್ದು ಕ್ರಿಕೆಟ್‌ ಪ್ರಸಾರದಲ್ಲಿ ರಾಷ್ಟ್ರೀಯ ಧ್ವಜ ಮತ್ತು ಚಿಹ್ನೆ ಬಳಸುತ್ತಿವೆ ಎಂದು ಅರ್ಜಿಯು ಆಕ್ಷೇಪಿಸಿತ್ತು.  

Also Read
ಕ್ರಿಕೆಟ್‌ ವೀಕ್ಷಣೆ ವೇಳೆ ಪಾಕಿಸ್ತಾನ ಪರ ಘೋಷಣೆ: ಮೂವರಿಗೆ ಜಾಮೀನು ನೀಡಿದ ಅಲಾಹಾಬಾದ್‌ ಹೈಕೋರ್ಟ್ [ಚುಟುಕು]

ರಾಷ್ಟ್ರೀಯ ಹೆಸರು, ಧ್ವಜ ಮತ್ತು ಚಿಹ್ನೆಗಳ ಬಳಕೆಯನ್ನು ನಿಯಂತ್ರಿಸುವ ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ- 1950 ಮತ್ತು ಭಾರತದ ಧ್ವಜ ಸಂಹಿತೆ 2002ರ ಉಲ್ಲಂಘನೆಯಾಗುವ ಸಾಧ್ಯತೆ ಇದೆ ಎಂದು ಅದು ವಾದಿಸಿತ್ತು.

ಆದ್ದರಿಂದ ಬಿಸಿಸಿಐಯನ್ನು “ರಾಷ್ಟ್ರೀಯ ತಂಡ”ಎಂದು ಕರೆಯದಂತೆ ನಿಷೇಧ ವಿಧಿಸಬೇಕು ಹಾಗೂ ಪ್ರಸಾರ ಭಾರತಿ ಸೇರಿದಂತೆ ಸರ್ಕಾರಿ ಮಾಧ್ಯಮ ಸಂಸ್ಥೆಗಳು ಕ್ರಿಕೆಟ್‌ ತಂಡವನ್ನು ಟೀಂ ಇಂಡಿಯಾ ಅಥವಾ ಭಾರತೀಯ ರಾಷ್ಟ್ರೀಯ ತಂಡ ಎಂದು ಕರೆಯದಂತೆ ನಿರ್ದೇಶನ ನೀಡಬೇಕೆಂದು ಅರ್ಜಿ ಕೋರಿತ್ತು.  

Kannada Bar & Bench
kannada.barandbench.com