ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರನ್ನು ʼಜಿಹಾದಿʼ ಎಂದು ಕರೆದಿದ್ದ ಜಗದೀಶ್ ಸಿಂಗ್ ಎಂಬ ವ್ಯಕ್ತಿ ತನ್ನ ಎಕ್ಸ್ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಸಿಂಗ್ ಕ್ಷಮೆಯಾಚನೆ ಕನಿಷ್ಠ ಎರಡು ತಿಂಗಳ ಕಾಲ ಖಾತೆಯಲ್ಲಿ ಪ್ರಕಟವಾಗಿರಬೇಕು ಎಂದು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು ತಿಳಿಸಿದ್ದಾರೆ.
ಜುಬೈರ್ ಅವರನ್ನು ಉಲ್ಲೇಖಿಸಿ ʼಒಮ್ಮೆ ಜಿಹಾದಿಯಾದವನು ಸದಾ ಜಿಹಾದಿಯೇʼ ಎಂದು ಸಿಂಗ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಂಗ್ ಕ್ಷಮೆಯಾಚಿಸಬೇಕು ಎಂದಿರುವ ನ್ಯಾಯಾಲಯ “ಈ ಮೇಲಿನ ಹೇಳಿಕೆ ನೀಡಿದ್ದಕ್ಕಾಗಿ ವಿಷಾದಿಸುತ್ತೇನೆ, ಯಾವುದೇ ದುರುದ್ದೇಶ ಅಥವಾ ಜುಬೈರ್ ಅವರನ್ನು ನೋಯಿಸುವ ಇಲ್ಲವೇ ಕುಕೃತ್ಯದ ಸಲುವಾಗಿ ಇದನ್ನು ಮಾಡಿಲ್ಲ” ಎಂದು ಸಿಂಗ್ ಉಲ್ಲೇಖಿಸಬೇಕು ಎಂದಿದೆ.
ವಿಚಾರಣೆಯ ಸಂದರ್ಭದಲ್ಲಿ ಸಿಂಗ್ ಪ್ರಕಟಿಸಿದ ಕೆಲ ಹೇಳಿಕೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಭಂಭಾನಿ ಅವರು ಅಂತಹ ಜನರನ್ನು ಸಾಮಾಜಿಕ ಮಾಧ್ಯಮದಿಂದ ನಿರ್ಬಂಧಿಸಬೇಕು ಎಂದರು.
ಆದರೆ ಜುಬೈರ್ ವ್ಯಕ್ತಿಯ ಕ್ಷಮೆಯಾಚನೆಯ ವಿವರಗಳನ್ನು ಮರುಟ್ವೀಟ್ ಮಾಡುವಂತಿಲ್ಲ ಅಥವಾ ಇನ್ನಾವುದೇ ಸಿವಿಲ್ ಇಲ್ಲವೇ ಕ್ರಿಮಿನಲ್ ವಿಚಾರಣೆಗೆ ಅದನ್ನು ಬಳಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿತು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.
ಸಿಂಗ್ ಅವರ ಟ್ವೀಟ್ ಸಾರ್ವಜನಿಕರಿಗೆ ಭಯ ಅಥವಾ ಆತಂಕವನ್ನು ಉಂಟುಮಾಡುವುದಿಲ್ಲ ಮತ್ತು ಆದ್ದರಿಂದ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ವರದಿ ಸಲ್ಲಿಸಿದ್ದರು.