ಮಧ್ಯಸ್ಥಿಕೆ ತೀರ್ಪು ಜಾರಿಗೆ ಆಫ್ಘನ್‌ ರಾಯಭಾರ ಕಚೇರಿ ಸ್ವತ್ತು ವಶಕ್ಕೆ ಮನವಿ: ದೆಹಲಿ ಹೈಕೋರ್ಟ್‌ನಿಂದ ನೋಟಿಸ್‌

ಡಿಕ್ರಿದಾರರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಆಫ್ಘಾನಿಸ್ತಾನ ರಾಯಭಾರ ಕಚೇರಿಯ ಖಾತೆಯಲ್ಲಿ ಕನಿಷ್ಠ ₹1.8 ಕೋಟಿ ಹಣ ಇರುವಂತೆ ನೋಡಿಕೊಳ್ಳುವಂತೆ ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಪೀಠವು ನಿರ್ದೇಶಿಸಿದೆ.
Delhi High Court and Afghanistan
Delhi High Court and Afghanistan
Published on

ಆಫ್ಘಾನಿಸ್ತಾನದ ವಿರುದ್ಧದ 2018ರಲ್ಲಿ ಮಧ್ಯಸ್ಥಿಕೆದಾರ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಜಾರಿಗೊಳಿಸುವ ಸಂಬಂಧ ಆಫ್ಘಾನಿಸ್ತಾನದ ರಾಯಭಾರ ಕಚೇರಿಯ ಸ್ಥಿರ ಮತ್ತು ಚರಾಸ್ತಿಯನ್ನು ವಶಪಡಿಸಿಕೊಳ್ಳುವಂತೆ ಕೋರಿ ದೆಹಲಿ ಮೂಲದ ಕಟ್ಟಡ ನಿರ್ಮಾಣ ಗುತ್ತಿಗೆದಾರರೊಬ್ಬರು ಸಲ್ಲಿಸಿದ್ದ ಮನವಿ ಆಧರಿಸಿ ಸೋಮವಾರ ದೆಹಲಿ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಆಫ್ಘಾನಿಸ್ತಾನದ ಮೇಲೆ ತಾಲಿಬಾನ್‌ ಹಿಡಿತ ಸಾಧಿಸಿರುವುದರಿಂದ ಮಧ್ಯಸ್ಥಿಕೆದಾರ ಮಂಡಳಿ ತೀರ್ಪು ಜಾರಿ ಸಾಧ್ಯತೆ ಬಗ್ಗೆ ಆತಂಕಗೊಂಡು ಕೆಎಲ್‌ಎ ಕನ್ಸ್ಟ್‌ ಟೆಕ್ನಾಲಜೀಸ್‌ ಪ್ರೈ. ಲಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುರೇಶ್‌ ಕುಮಾರ್‌ ಕೈಟ್‌ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

ಮಧ್ಯಸ್ಥಿಕೆದಾರರ ತೀರ್ಪಿನ ಪ್ರಕಾರ ಬಡ್ಡಿ ಒಳಗೊಂಡು ₹1.8 ಕೋಟಿಯನ್ನು ಆಫ್ಘಾನಿಸ್ತಾನ ರಾಯಭಾರ ಕಚೇರಿಯು ಬಾಕಿ ಉಳಿಸಿಕೊಂಡಿದೆ ಎಂದು ಪೀಠಕ್ಕೆ ತಿಳಿಸಲಾಯಿತು. ಡಿಕ್ರಿದಾರರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಆಫ್ಘಾನಿಸ್ತಾನ ರಾಯಭಾರ ಕಚೇರಿಯ ಖಾತೆಯಲ್ಲಿ ಕನಿಷ್ಠ ₹1.8 ಕೋಟಿ ಹಣ ಇರುವಂತೆ ನೋಡಿಕೊಳ್ಳುವಂತೆ ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಪೀಠವು ನಿರ್ದೇಶಿಸಿದೆ.

ಈ ಹಿಂದೆ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರುವಂತೆ ಆಫ್ಘಾನಿಸ್ತಾನ ರಾಯಭಾರ ಕಚೇರಿಗೆ ನ್ಯಾಯಾಲಯ ಸ್ವಾತಂತ್ರ್ಯ ಕಲ್ಪಿಸಿತ್ತು. 2018ರಲ್ಲಿ ಅರ್ಜಿದಾರರ ಪರವಾಗಿ ಮಧ್ಯಸ್ಥಿಕೆ ಮಂಡಳಿ ತೀರ್ಪು ಹೊರಡಿಸಲಾಗಿದೆ. 2021ರ ಜೂನ್‌ 18ರಂದು ತೀರ್ಪಿನಲ್ಲಿ ಉಲ್ಲೇಖಿಸಲಾದ ಮೊತ್ತ ಪಾವತಿಸುವಂತೆ ದೆಹಲಿ ಹೈಕೋರ್ಟ್‌ ನಿರ್ದೇಶಿಸಿತ್ತು.

ಜೂನ್‌ 18ರ ದೆಹಲಿ ಹೈಕೋರ್ಟ್‌ ಆದೇಶದ ವಿರುದ್ದ ಸಲ್ಲಿಸಲಾದ ಮನವಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ವಿವರಿಸಲಾಯಿತು.

ಆಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದರಿಂದ ಇಲ್ಲಿನ ರಾಯಭಾರ ಕಚೇರಿ ಮತ್ತು ರಾಯಭಾರಿಯಿಂದ ಸಲಹೆ-ಸೂಚನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಕರಣವನ್ನು ಮುಂದೂಡುವಂತೆ ಕೋರಿ ಆಫ್ಘಾನಿಸ್ತಾನದ ಪರ ವಕೀಲರು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಗೆ ಪತ್ರ ಬರೆದಿದ್ದರು. ತಮ್ಮ ಕಕ್ಷಿದಾರರಿಂದ ಯಾವುದೇ ಸಲಹೆ –ಸೂಚನೆ ಬಂದಿಲ್ಲ. ಹೀಗಾಗಿ, ಎರಡು ವಾರಗಳ ಪ್ರಕರಣ ಮುಂದೂಡುವಂತೆ ಆಫ್ಘಾನಿಸ್ತಾನ ಪರ ವಕೀಲರು ದೆಹಲಿ ಹೈಕೋರ್ಟ್‌ಗೂ ಮನವಿ ಮಾಡಿದ್ದರು.

ಡಿಕ್ರಿದಾರರು ಸಲ್ಲಿಸಿರುವಂತೆ ಆಫ್ಘಾನಿಸ್ತಾನ ರಾಯಭಾರ ಕಚೇರಿಯ ಆಸ್ತಿಗಳನ್ನು ದಾಲಿಸಿಕೊಳ್ಳಲು ನಿರ್ಧರಿಸಿದ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿದೆ. 2018ರಲ್ಲಿ ಹೈಕೋರ್ಟ್‌ನ ಹಿಂದಿನ ನಿರ್ದೇಶನಗಳ ಹೊರತಾಗಿಯೂ ಆಫ್ಘಾನಿಸ್ತಾನದ ರಾಯಭಾರ ಕಚೇರಿಯ ಆಸ್ತಿಯನ್ನು ಬಹಿರಂಗಪಡಿಸಲು ಸಾಧ್ಯವಾಗಿಲ್ಲ ಎಂದು ವಕೀಲರು ಹೇಳಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 13ಕ್ಕೆ ಮುಂದೂಡಲಾಗಿದೆ.

Kannada Bar & Bench
kannada.barandbench.com