2021ನೇ ಸಾಲಿನ 10ನೇ ತರಗತಿ ಪರೀಕ್ಷೆಗಳಿಗೆ ಅಂಕ ನಿಗದಿಪಡಿಸಲು ಪ್ರಸ್ತುತ ರೂಪಿಸಲಾಗಿರುವ ನೀತಿಯಲ್ಲಿ ಬದಲಾವಣೆ ತರಬೇಕೆಂದು ದೆಹಲಿ ಹೈಕೋರ್ಟ್‌ಗೆ ಮನವಿಯೊಂದು ಸಲ್ಲಿಕೆಯಾಗಿದ್ದು ಈ ಸಂಬಂಧ ಸಿಬಿಎಸ್‌ಇ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೆಹಲಿ ಹೈಕೋರ್ಟ್ ಬುಧವಾರ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಈ ಕುರಿತಂತೆ ನೋಟಿಸ್ ನೀಡಿದೆ. ಶಿಕ್ಷಣದ ವ್ಯಾಪಾರೀಕರಣವನ್ನು ಪ್ರತಿಭಟಿಸಿ ಹೋರಾಡುತ್ತಿರುವ ಪೋಷಕ ಸಮುದಾಯಗಳ ವಿರುದ್ಧ ಶಾಲಾಡಳಿತ ಮಂಡಳಿಗಳು ಪ್ರಸ್ತುತ ನೀತಿಯನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿ ʼಜಸ್ಟಿಸ್ ಫಾರ್ ಆಲ್ʼ ಎಂಬ ಎನ್‌ಜಿಒ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಮಂಡಳಿ ಈ ಬಗೆಯ ನೀತಿ ರೂಪಿಸಿರುವುದು ಸಂವಿಧಾನದ 21 ಎ ವಿಧಿಗೆ ವ್ಯತಿರಿಕ್ತವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಿಬಿಎಸ್‌ಇ ಶಾಲೆಯೊಂದರ ಕಾರ್ಯಕ್ಷಮತೆಯನ್ನು ಆಧರಿಸಿ ನೀತಿ ರೂಪಿಸಲಾಗಿದೆಯೇ ವಿನಾ ವಿದ್ಯಾರ್ಥಿಗಳ ವೈಯಕ್ತಿಕ ಸಾಧನೆಯನ್ನು ಪರಿಗಣಿಸಿ ಅಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೇವಲ ಶಾಲೆಯ ಕಾರ್ಯಕ್ಷಮತೆಯನ್ನು ಗಮನಿಸಿ ಅಂಕಗಳನನ್ನು ಪರಿಗಣಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಸಂಬಂಧ ಅಹವಾಲುಗಳನ್ನು ಆಲಿಸಲು ಸಹ ಯಾವುದೇ ವ್ಯವಸ್ಥೆ ಇಲ್ಲ, ಅಲ್ಲದೆ ಶಾಲಾಡಳಿತ ಮಂಡಳಿಗಳ ಕೈಗೆ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ದಯವಾಗಿ ಒಪ್ಪಿಸಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ಅರ್ಜಿದಾರರ ಪರವಾಗಿ ಖಗೇಶ್ ಝಾ ಹಾಜರಿದ್ದರು.