
ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಅವರು ಹೂಡಿದ್ದ ಮಾನಹಾನಿ ಪ್ರಕರಣದಲ್ಲಿ ನೀಡಿದ್ದ ಆದೇಶವನ್ನು ಪಾಲಿಸಲು ಸಂಸದ ಸಾಕೇತ್ ಗೋಖಲೆ ವಿಫಲರಾಗಿರುವ ಕಾರಣಕ್ಕೆ ಅವರ ವೇತನದ ಒಂದು ಭಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ದೆಹಲಿ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿಯಾದ ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಕ್ಕೆ ಕ್ಷಮೆಯಾಚಿಸುವಂತೆ ಮತ್ತು ಅವರಿಗೆ ಪರಿಹಾರ ನೀಡುವಂತೆ ನ್ಯಾಯಾಲಯವು ಈ ಹಿಂದೆ ಆದೇಶಿಸಿತ್ತು. ಆದರೆ ಆದೇಶವನ್ನು ಪಾಲಿಸಲು ಟಿಎಂಸಿ ನಾಯಕ, ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ವಿಫಲರಾದ ಹಿನ್ನೆಲೆಯಲ್ಲಿ ಅವರ ವೇತನದ ಒಂದು ಭಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ದೆಹಲಿ ಹೈಕೋರ್ಟ್ ಸೂಚಿಸಿದೆ.
ಲಕ್ಷ್ಮಿ ಪುರಿ ಅವರು ಆದಾಯ ಮೀರಿ ಸ್ವಿಟ್ಜರ್ಲೆಂಡ್‌ನಲ್ಲಿ ಆಸ್ತಿ ಗಳಿಸಿದ್ದಾರೆ ಎಂದು ಗೋಖಲೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಗೋಖಲೆ ಅವರ ವಿರುದ್ಧ ಲಕ್ಷ್ಮಿ ಮೊಕದ್ದಮೆ ದಾಖಲಿಸಿದ್ದರು.
ಗೋಖಲೆ ಅವರು ಲಕ್ಷ್ಮೀ ವಿರುದ್ಧ ತಪ್ಪು, ಸುಳ್ಳು ಆರೋಪ ಮಾಡಿದ್ದಾರೆ ಎಂದು ಜುಲೈ 1, 2024ರಂದು ಹೈಕೋರ್ಟ್ ತೀರ್ಪು ನೀಡಿತ್ತು. ಲಕ್ಷ್ಮಿ ಅವರಿಗೆ ₹50 ಲಕ್ಷ ಪರಿಹಾರ ನೀಡಬೇಕು ಜೊತೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಕ್ಷಮೆಯಾಚನೆ ಪ್ರಕಟಿಸಬೇಕು ಎಂದು ಆದೇಶಿಸಿತ್ತು.
ಆದರೆ ಗೋಖಲೆ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಏಕಸದಸ್ಯ ಪೀಠ ಜುಲೈ 2024ರ ತೀರ್ಪು ಜಾರಿಗೊಳಿಸಲು ನಿರ್ದೇಶಿಸುವಂತೆ ಲಕ್ಷ್ಮಿ ಹೈಕೋರ್ಟ್ ಮೊರೆ ಹೋಗಿದ್ದರು.
ಜುಲೈ 2024 ರ ತೀರ್ಪಿಗೆ ಯಾವುದೇ ತಡೆ ಇಲ್ಲದಿದ್ದರೂ, ಇಲ್ಲಿಯವರೆಗೆ ಕ್ಷಮೆಯಾಚಿಸದಿರಲು ಕಾರಣವೇನು ಎಂದು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಪ್ರಶ್ನಿಸಿದರು.
ಜೊತೆಗೆ ಮಾನನಷ್ಟಕ್ಕೆ ಪರಿಹಾರ ಪಾವತಿಸಲು ಈ ಹಿಂದೆ ಆದೇಶಿಸಲಾಗಿದ್ದ ₹ 50 ಲಕ್ಷ ಠೇವಣಿ ಇಡುವವರೆಗೆ ರಾಜ್ಯಸಭಾ ಸದಸ್ಯ ಗೋಖಲೆ ಅವರ ವೇತನದ ಒಂದು ಭಾಗವನ್ನು ಸಿಪಿಸಿ ಸೆಕ್ಷನ್ 60 ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆ ಮೇ 28 ರಂದು ನಡೆಯಲಿದೆ.