ನೆಟ್‌ಫ್ಲಿಕ್ಸ್, ಡಿಸ್ನಿ, ವಾರ್ನರ್ ಬ್ರದರ್ಸ್ ಮತ್ತಿತರ ಸ್ಟುಡಿಯೋಗಳಿಗೆ ಸೇರಿದ ಸಿನಿಮಾ, ಸಾಕ್ಷ್ಯಚಿತ್ರ, ವೆಬ್ ಸರಣಿಯಂತಹ ವಸ್ತು ವಿಷಯಗಳನ್ನು ಕಾನೂನುಬಾಹಿರವಾಗಿ ಪ್ರದರ್ಶಿಸುವ ಮತ್ತು ಡೌನ್‌ಲೋಡ್‌ಗೆ ಅವಕಾಶ ಕಲ್ಪಿಸುವ 40 ಜಾಲತಾಣಗಳಿಗೆ ನಿರ್ಬಂಧ ಹೇರುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ವಿವಿಧ ಇಂಟರ್‌ನೆಟ್ ಸೇವಾ ಪೂರೈಕೆದಾರರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಸ್ಟುಡಿಯೊಗಳ ವಾದದಲ್ಲಿ ಹುರುಳಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಇಂತಹ ಜಾಲತಾಣಗಳಿಗೆ ತಡೆಯಾಜ್ಞೆ ನೀಡದಿದ್ದರೆ ಸರಿಪಡಿಸಲಾಗದ ನಷ್ಟ ಉಂಟಾಗಲಿದೆ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಅಕ್ರಮ ಜಾಲತಾಣಗಳ ವಿರುದ್ಧ ಯುನಿವರ್ಸಲ್ ಸಿಟಿ ಸ್ಟುಡಿಯೋಸ್ ಕಂಪೆನಿ, ವಾರ್ನರ್ ಬ್ರದರ್ಸ್, ಎಂಟರ್‌ಟೈನ್‌ಮೆಂಟ್ ಇನ್‌ಕಾರ್ಪೊರೇಟೆಡ್, ಕೊಲಂಬಿಯಾ ಪಿಕ್ಚರ್ ಇಂಡಸ್ಟ್ರೀಸ್, ನೆಟ್‌ಫ್ಲಿಕ್ಸ್ ಸ್ಟುಡಿಯೋಸ್, ಪ್ಯಾರಾಮೌಂಟ್ ಪಿಕ್ಚರ್ಸ್ ಕಾರ್ಪೊರೇಷನ್ ಮತ್ತು ಡಿಸ್ನಿ ಎಂಟರ್‌ಪ್ರೈಸಸ್ ನ್ಯಾಯಾಲಯದ ಮೊರೆ ಹೋಗಿದ್ದು, ಯಾವುದೇ ಅನುಮತಿ ಅಥವಾ ಪರವಾನಗಿ ಇಲ್ಲದೆ ತಮ್ಮ ವಸ್ತುವಿಷಯವನ್ನು ಪ್ರದರ್ಶನ ಮತ್ತು ಡೌನ್‌ಲೋಡ್ ಮಾಡಲು ಅನುಮತಿಸಬಾರದು ಎಂದು ವಾದಿಸಿದ್ದವು.
ಪ್ರತಿವಾದಿಗಳ ಜಾಲತಾಣಗಳಲ್ಲಿ ಕಾನೂನು ಸೂಚನೆ ನೀಡಲಾಗಿದ್ದರೂ, ಅವು ಫಿರ್ಯಾದಿಗಳ ಮೂಲ ವಸ್ತುವಿಷಯ ಕುರಿತಾದ ಹಕ್ಕು ಉಲ್ಲಂಘಿಸುವುದನ್ನು ಮುಂದುವರೆಸಿವೆ ಎಂದು ವಾದಿಸಲಾಯಿತು.
ಹೆಚ್ಚಿನ ಪ್ರತಿವಾದಿ ಜಾಲತಾಣಗಳು ಸ್ವಭಾವತಃ ಅನಾಮಿಕವಾಗಿದ್ದು ಜಾಲತಾಣದ ಮಾಲೀಕರಿಗೆ ಸಂಬಂಧಿಸಿದಂತೆ ಸಾರ್ವಜನಿಕ ಡೊಮೇನ್‌ನಲ್ಲಿ ನೀಡಲಾದ ಮಾಹಿತಿ ಅಪೂರ್ಣಅಥವಾ ತಪ್ಪು ಅಂಶಗಳಿಂದ ಕೂಡಿದ್ದು ಕೆಲವೆಡೆ ಗೋಪ್ಯತೆಯ ನೆಪವೊಡ್ಡಿ ರಕ್ಷಣೆ ಪಡೆದುಕೊಳ್ಳಲಾಗಿದೆ ಎಂದು ಫಿರ್ಯಾದಿಗಳು ಹೇಳಿದ್ದರು.
ವಾದ ಪರಿಗಣಿಸಿದ ನ್ಯಾಯಾಲಯ ದೂರುದಾರರಿಗೆ ಸೇರಿದ ವಸ್ತುವಿಷಯವನ್ನು ಹೋಸ್ಟ್ ಮಾಡದಂತೆ ಅಕ್ರಮ ಜಾಲತಾಣಗಳಿಗೆ ನಿರ್ಬಂಧ ವಿಧಿಸಿತು.
ಕೂಡಲೇ ಕ್ರಮ ಕೈಗೊಳ್ಳುವಂತೆ ಮತ್ತು ನಿರ್ಬಂಧಕ ಆದೇಶಗಳನ್ನುಇನ್ನು ಐದು ದಿನಗಳೊಳಗೆ ಅಕ್ರಮ ಜಾಲತಾಣಗಳಿಗೆ ರವಾನಿಸುವಂತೆ ತಂತ್ರಜ್ಞಾನ ಇಲಾಖೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಿಗೆ (MEITY) ಪೀಠ ಸೂಚಿಸಿತು.