ಅಜ್ಮತ್ ಅಲಿ ಖಾನ್ ಎಂಬವರು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿರುವ ಸುದರ್ಶನ್ ಸುದ್ದಿ ವಾಹಿನಿ ವರದಿಗೆ ಶುಕ್ರವಾರ ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, ತಕ್ಷಣ ವಿಡಿಯೊ ತೆಗೆದು ಹಾಕುವಂತೆ ವಾಹಿನಿಗೆ ನಿರ್ದೇಶಿಸಿದೆ.
ವರದಿ ಮತ್ತು ಕಾರ್ಯಕ್ರಮದಲ್ಲಿ ಜಿಹಾದಿ ಪದ ಬಳಕೆಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ. ವಿಡಿಯೊ ಕೆಳಗಡೆ ಬಂದಿರುವ ಬೆದರಿಕೆ ಅಭಿಪ್ರಾಯಗಳನ್ನು ಪರಿಗಣಿಸಿರುವ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರು ಇದು ಖಾನ್ ಅವರ ರಕ್ಷಣೆ ಮತ್ತು ಸುರಕ್ಷತೆಗೆ ಅಪಾಯ ತಂದೊಡ್ಡಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರು ವೀಕ್ಷಿಸಿದಂತೆ ವಿಡಿಯೊವನ್ನು ನಿರ್ಬಂಧಿಸುವಂತೆ ಯೂಟ್ಯೂಬ್, ಸುದರ್ಶನ್ ಸುದ್ದಿ ವಾಹಿನಿ, ಸರ್ಕಾರದ ಪ್ರಾಧಿಕಾರಗಳು ಮತ್ತು ಟ್ವಿಟರ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.
“ಇದು ಅರ್ಜಿದಾರರ ಭದ್ರತೆಯ ಪ್ರಶ್ನೆಯಾಗಿದೆ. ಸುದರ್ಶನ್ ವಾಹಿನಿಯು ವಿಡಿಯೊವನ್ನು ನಿರ್ಬಂಧಿಸದಿದ್ದರೆ, ನೀವು (ಸಾಮಾಜಿಕ ಮಾಧ್ಯಮಗಳಲ್ಲಿ) ನಿರ್ಬಂಧಿಸಬೇಕು. ನಮ್ಮ ನಿರ್ದೇಶನ ಸ್ಪಷ್ಟಾಗಿದೆ. ಆ ವಿಡಿಯೊವನ್ನು ಎಲ್ಲರೂ ನಿರ್ಬಂಧಿಸಬೇಕು” ಎಂದು ನ್ಯಾಯಮೂರ್ತಿ ಪ್ರತಿಭಾ ಆದೇಶದಲ್ಲಿ ಹೇಳಿದ್ದಾರೆ.
ಏಳು ವರ್ಷಗಳಿಂದ ಸಂಬಂಧ ಹೊಂದಿದ್ದ ಮಹಿಳೆಯು ತಾನು ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಲು ಪ್ರಯತ್ನಿಸಿದ್ದೇನೆ ಎಂದು ಆರೋಪಿಸಿರುವುದನನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಪ್ರತಿಭಾ ಸಿಂಗ್ ಅವರು ವಿಚಾರಣೆ ನಡೆಸಿದರು.
ಈ ಆರೋಪದ ಮೇಲೆ ದೆಹಲಿ ಪೊಲೀಸರು ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ನ್ಯಾಯಾಲಯವು ಖಾನ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ಸ್ಥಿತಿಗತಿ ವರದಿ ಸಲ್ಲಿಸಲು ಆದೇಶಿಸಿದೆ. ದೂರುದಾರೆಯನ್ನು ಸಂಪರ್ಕಿಸಿ, ಆಕೆಗೆ ನ್ಯಾಯಾಲಯದ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.