ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆ ನಿರ್ಬಂಧಿಸಿ ಆದೇಶ ಮಾಡಿದ ದೆಹಲಿ ಹೈಕೋರ್ಟ್‌

ತಮ್ಮ ಹೆಸರು, ರೂಪ, ಕಂಠ ಅಥವಾ ವ್ಯಕ್ತಿತ್ವದ ಯಾವುದೇ ಗುಣಲಕ್ಷಣವನ್ನು ತಮ್ಮ ಅನುಮತಿ ಇಲ್ಲದೇ ಬಳಸದಂತೆ ಸಮಗ್ರ ಆದೇಶ ಮಾಡಲು ದೆಹಲಿ ಹೈಕೋರ್ಟ್‌ಗೆ ಬಚ್ಚನ್‌ ಅವರು ಅರ್ಜಿ ಸಲ್ಲಿಸಿದ್ದರು.
Amitabh Bachchan
Amitabh BachchanFacebook

ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರ ವ್ಯಕ್ತಿತ್ವ ಮತ್ತು ಪ್ರಚಾರದ ಹಕ್ಕುಗಳನ್ನು ವಿಸ್ತೃತ ನೆಲೆಯಲ್ಲಿ ಯಾರೊಬ್ಬರು ಉಲ್ಲಂಘಿಸದಂತೆ ದೆಹಲಿ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ [ಅಮಿತಾಭ್‌ ಬಚ್ಚನ್‌ ವರ್ಸಸ್‌ ರಜತ್‌ ನೇಗಿ ಮತ್ತು ಇತರರು].

“ಫಿರ್ಯಾದಿಯು ಜನಪ್ರಿಯ ವ್ಯಕ್ತಿ ಎನ್ನುವುದು ನಿರ್ವಿವಾದವಾಗಿದ್ದು, ಅವರು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಚ್ಚನ್‌ ಅವರ ಒಪ್ಪಿಗೆ ಅಥವಾ ಸೂಚನೆ ಪಡೆಯದೇ ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರಚಾರ ಮಾಡಲು ಪ್ರತಿವಾದಿಗಳು ಬಚ್ಚನ್‌ ಅವರ ಪ್ರಸಿದ್ಧಿ, ಸ್ಥಾನಮಾನ ಬಳಸಿಕೊಳ್ಳುತ್ತಿದ್ದಾರೆ. ದೂರನ್ನು ಪರಿಗಣಿಸಿದ ಬಳಿಕ ಮೇಲ್ನೋಟಕ್ಕೆ ಪ್ರಯೋಜನಗಳ ಸಂತುಲಿತತೆಯು ಫಿರ್ಯಾದಿಯ ಪರವಾಗಿದೆ” ಎಂದು ನ್ಯಾಯಮೂರ್ತಿ ನವೀನ್‌ ಚಾವ್ಲಾ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಆದೇಶ ಮಾಡದಿದ್ದರೆ ಬಚ್ಚನ್‌ ಅವರಿಗೆ ಸರಿಪಡಿಸಲಾರದ ನಷ್ಟ ಮತ್ತು ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಕೆಲವು ಚಟುವಟಿಕೆಗಳು ಬಚ್ಚನ್‌ ಅವರ ಹೆಸರಿಗೆ ಕಳಂಕ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಾಧಿಕಾರಿಗಳು ಮತ್ತು ಟೆಲಿಕಾಂ ಸೇವೆ ನೀಡುವವರಿಗೆ ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ.

ಬಚ್ಚನ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು “ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ನಿಮ್ಮ ಮುಂದೆ ಸರಳವಾಗಿ ಪ್ರಸ್ತುತಪಡಿಸುತ್ತಿದ್ದೇನೆ. ಯಾರೋ ಅವರ ಟಿ-ಶರ್ಟ್‌ ಉತ್ಪಾದಿಸುತ್ತಿದ್ದು, ಅದರಲ್ಲಿ ಬಚ್ಚನ್‌ ಅವರ ಚಿತ್ರವನ್ನು ಹಾಕುತ್ತಾರೆ. ಕೆಲವರು ಅವರ ಪೋಸ್ಟರ್‌ಗಳನ್ನು ಮಾರಾಟ ಮಾಡುತ್ತಾರೆ. ಯಾರೊ ಒಬ್ಬರು amitabhbachchan.com ಡೊಮೈನ್ ಸೃಷ್ಟಿಸಿದ್ದಾರೆ. ಈ ಕಾರಣಕ್ಕಾಗಿ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೇವೆ” ಎಂದರು.

ತಮ್ಮ ಹೆಸರು, ರೂಪ, ಕಂಠ ಅಥವಾ ವ್ಯಕ್ತಿತ್ವದ ಯಾವುದೇ ಗುಣಲಕ್ಷಣವನ್ನು ತಮ್ಮ ಅನುಮತಿ ಇಲ್ಲದೇ ಬಳಸದಂತೆ ಸಮಗ್ರ ಆದೇಶ ಮಾಡಲು ದೆಹಲಿ ಹೈಕೋರ್ಟ್‌ಗೆ ಬಚ್ಚನ್‌ ಅವರು ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com