ಕೋವಿಡ್ ಸಾವುಗಳಿಗೆ ಅಲೋಪತಿ ಕಾರಣ ಎನ್ನುವ ಆರೋಪ ಕೈಬಿಡುವಂತೆ ಪತಂಜಲಿ, ಬಾಬಾ ರಾಮದೇವ್‌ಗೆ ದೆಹಲಿ ಹೈಕೋರ್ಟ್ ಆದೇಶ

ದೇಶದ ವಿವಿಧ ವೈದ್ಯ ಸಂಘಗಳು ಪತಂಜಲಿ, ಬಾಬಾ ರಾಮದೇವ್ ಹಾಗೂ ಸಂಸ್ಥೆಯ ಪ್ರವರ್ತಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದವು.
Patanjali Promoter Baba Ramdev, doctors
Patanjali Promoter Baba Ramdev, doctors
Published on

ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ್ದ ಸಂದರ್ಭದಲ್ಲಿ ಅಲೋಪತಿ ವೈದ್ಯರು ಲಕ್ಷಾಂತರ ಜನರ ಸಾವಿಗೆ ಕಾರಣರಾದರು ಎಂದು ತಮ್ಮ ಕರೋನಿಲ್‌ ಔಷಧ ಪ್ರಚಾರದ ವೇಳೆ ಮಾಡಿದ್ದ ಆರೋಪಗಳನ್ನು ತೆಗೆದುಹಾಕುವಂತೆ ಪತಂಜಲಿ ಆಯುರ್ವೇದ್ ಸಂಸ್ಥೆ, ಬಾಬಾ ರಾಮದೇವ್‌ ಹಾಗೂ ಅದರ ಪ್ರವರ್ತಕರಿಗೆ ದೆಹಲಿ ಹೈಕೋರ್ಟ್ ಸೋಮವಾರ ಆದೇಶಿಸಿದೆ [ಏಮ್ಸ್‌ ಸ್ಥಾನಿಕ ವೈದ್ಯರು ಮತ್ತು ರಾಮ್‌ ಕಿಶನ್‌ ಯಾದವವ್‌ ಅಲಿಯಾಸ್‌ ಬಾಬಾ ರಾಮದೇವ್‌ ನಡುವಣ ಪ್ರಕರಣ].

ಬಾಬಾ ರಾಮದೇವ್‌ ಅವರ ಸಹವರ್ತಿ ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಇಂತಹ ಆರೋಪಗಳನ್ನು ಮಾಡದಂತೆ ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಮಧ್ಯಂತರ ಆದೇಶ ನೀಡಿದರು.

Also Read
ಪತಂಜಲಿ ಪ್ರಕರಣ: ಬಾಬಾ ರಾಮದೇವ್ ಬಳಿಕ ಸುಪ್ರೀಂ ಕೋರ್ಟ್ ಎದುರು ಉತ್ತರಾಖಂಡ ಪರವಾನಗಿ ಪ್ರಾಧಿಕಾರದ ಕ್ಷಮೆಯಾಚನೆ

ಅವರ ಟ್ವೀಟ್‌ಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿರುವ ನ್ಯಾಯಾಲಯ ಹಾಗೆ ಮಾಡಲು ವಿಫಲವಾದರೆ ಸಾಮಾಜಿಕ ಮಾಧ್ಯಮ ಮಧ್ಯಸ್ಥಗಾರರು (ಎಕ್ಸ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ರೀತಿಯ ಕಂಪೆನಿಗಳು ) ಆ ವಸ್ತುವಿಷಯಗಳನ್ನು ತೆಗೆದುಹಾಕಬೇಕು ಎಂದು ತಿಳಿಸಿದೆ.

ವಿಸ್ತೃತ ತೀರ್ಪಿನಲ್ಲಿ, ಲಕ್ಷಗಟ್ಟಲೆ ಕೋವಿಡ್ ಸಾವುಗಳಿಗೆ ಅಲೋಪತಿ ವೈದ್ಯರನ್ನು ದೂಷಿಸುವ ರಾಮ್‌ದೇವ್ ಅವರ ನಡೆ ಆಘಾತಕಾರಿಯಾದದ್ದು. ಪತಂಜಲಿ ಮಾತ್ರೆಗಳನ್ನು ಕರೋನಿಲ್ ಎಂದು ಹಣೆಪಟ್ಟಿ ಹಚ್ಚಿರುವುದನ್ನು ಔಷಧ ಮತ್ತು ಮತ್ತು ಸೌಂದರ್ಯಸಾಧನ ಕಾಯಿದೆಯಡಿ  ಅನುಮತಿಸಲಾಗದು ಎಂದು ಪೀಠ ಹೇಳಿದೆ.

ಹೀಗೆ ಕರೋನಿಲ್‌ ಪ್ರಚಾರಕ್ಕೆ ಅವಕಾಶವಿತ್ತರೆ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಜೊತೆಗೆ ಆಯುರ್ವೇದಕ್ಕೆ ಅಪಖ್ಯಾತಿ ಬರಬಹುದು ಎಂದು ಪೀಠ ಒತ್ತಿ ಹೇಳಿತು.

Also Read
ಸುಪ್ರೀಂ ಕಪಾಳಮೋಕ್ಷ: ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ

ಸಾಂಕ್ರಾಮಿಕ ರೋಗ ಹರಡಿದ್ದ ವೇಳೆ ಜನ ಹೆಚ್ಚು ಅಪಾಯದಲ್ಲಿದ್ದಾಗ ರಾಮ್‌ದೇವ್ ಮತ್ತವರ ಸಹಚರರು ಏನು ಹೇಳಿದರೂ ಜನ ಕೇಳುವಂತಿದ್ದಾಗ ಈ ಹೇಳಿಕೆಗಳನ್ನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಭಂಭಾನಿ ತಿಳಿಸಿದರು.

ರಿಷಿಕೇಶ, ಪಾಟ್ನಾ, ಭುವನೇಶ್ವರ, ಚಂಡೀಗಢ, ಮೀರತ್‌, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ವೈದ್ಯ ಸಂಘಗಳು ಪತಂಜಲಿ,  ಬಾಬಾ ರಾಮದೇವ್ ಹಾಗೂ ಸಂಸ್ಥೆಯ ಪ್ರವರ್ತಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದವು.

Kannada Bar & Bench
kannada.barandbench.com