
ಈಶ ಪ್ರತಿಷ್ಠಾನದ ಸಂಸ್ಥಾಪಕ ಜಗದೀಶ್ "ಜಗ್ಗಿ" ವಾಸುದೇವ್ ಅಲಿಯಾಸ್ ಸದ್ಗುರು ಅವರ ವ್ಯಕ್ತಿತ್ವ ಹಕ್ಕಿಗೆ ಚ್ಯುತಿ ತರಲು ಕೃತಕ ಬುದ್ಧಿಮತ್ತೆ (ಎಐ) ದುರುಪಯೋಗಪಡಿಸಿಕೊಳ್ಳದಂತೆ ನಕಲಿ ಜಾಲತಾಣಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ ವಿಧಿಸಿ ದೆಹಲಿ ಹೈಕೋರ್ಟ್ ಡೈನಾಮಿಕ್+ ಪ್ರತಿಬಂಧಕಾಜ್ಞೆ ಹೊರಡಿಸಿದೆ.
ನಿರ್ದಿಷ್ಟ ಜಾಲತಾಣ ಅಥವಾ ಯುಆರ್‌ಎಲ್‌ಗಳನ್ನು ಮಾತ್ರವಲ್ಲದೆ ಅದರ ಪ್ರತಿರೂಪ ಜಾಲತಾಣಗಳು ಅಥವಾ ಈ ರೀತಿಯ ಉಲ್ಲಂಘನೆ ಮಾಡುವ ಉಳಿದ ಜಾಲತಾಣಗಳಿಗೆ ಕೂಡ ನಿರ್ಬಂಧ ವಿಧಿಸುವುದಕ್ಕೆ ಡೈನಮಿಕ್ ಪ್ರತಿಬಂಧಕಾಜ್ಞೆ ಎನ್ನಲಾಗುತ್ತದೆ. ಇದು ಭವಿಷ್ಯದಲ್ಲಿ ನಡೆಯುವ ಹಕ್ಕು ಉಲ್ಲಂಘನೆಯನ್ನೂ ತಡೆಯುವಂತಹ ವಿಶಾಲವಾದ ಪ್ರತಿಬಂಧಕಾಜ್ಞೆಯಾಗಿದೆ.
ಜಗ್ಗಿ ಅವರ ವ್ಯಕ್ತಿತ್ವ ಹಕ್ಕುಗಳಿಗೆ ಧಕ್ಕೆ ತರುತ್ತಿರುವ ಸಾಮಾಜಿಕ ಜಾಲತಾಣದ ಖಾತೆಗಳನ್ನು ತೆಗೆದುಹಾಕುವಂತೆ ಮತ್ತು ಅಂತಹ ಖಾತೆ ಬಳಕೆದಾರರ ಮೂಲ ಚಂದಾದಾರರ ಮಾಹಿತಿ ಹಂಚಿಕೊಳ್ಳುವಂತೆ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರು ಎಕ್ಸ್ ಮತ್ತು ಯೂಟ್ಯೂಬ್‌ಗೆ ಸೂಚಿಸಿದ್ದಾರೆ.
ಸದ್ಗುರು ಅವರ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗಾಗಿ ಏಕಪಕ್ಷೀಯ ಮತ್ತು ಮಧ್ಯಂತರ ಡೈನಮಿಕ್ ಪ್ರತಿಬಂಧಕಾಜ್ಞೆ ಹೊರಡಿಸಲು ಅಗತ್ಯವಾದ ಪ್ರಾಥಮಿಕ ಸಾಕ್ಷ್ಯಗಳನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಕೃತಕ ಬುದ್ಧಿಮತ್ತೆಯ ದುರುಪಯೋಗದ ಮೂಲಕ ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಜಗ್ಗಿ ವಾಸುದೇವ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ಕೆಲವು ನಕಲಿ ಜಾಲತಾಣಗಳನ್ನು ಅವರು ಉದಾಹರಣೆಯಾಗಿ ಪ್ರಸ್ತಾಪಿಸಿದ್ದರು.
ತನ್ನ ಬಂಧನದ ನಕಲಿ ಸುದ್ದಿಗಳನ್ನು ಪ್ರಕಟಿಸುವ ಮತ್ತು ತನ್ನ ಅನುಯಾಯಿಗಳು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲು ಅಥವಾ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಲು ಯತ್ನಿಸುವ ವಂಚಕ ಜಾಲತಾಣವೊಂದು ಇದೆ. 'ಟ್ರೆಂಡ್ಟಾಸ್ಟಿಕ್ ಪ್ರಿಸಂ' ಎಂಬ ಸಂಶಯಾಸ್ಪದ ವ್ಯಾಪಾರ ವೇದಿಕೆಯನ್ನು ತಾನು ಬೆಂಬಲಿಸುತ್ತಿದ್ದೇನೆ ಎಂದು ಬಿಂಬಿಸುವ ನಕಲಿ ಸಂದರ್ಶನವನ್ನು ಮತ್ತೊಂದು ಸಂಸ್ಥೆ ಸೃಷ್ಟಿಸಿದೆ. ತನ್ನ ಹೆಸರು ಬಳಸಿ ಕೂದಲು ಬೆಳವಣಿಗೆಯ ಉತ್ಪನ್ನವನ್ನು ಮಾರಾಟ ಮಾಡುವ ಮತ್ತು ಗರ್ಭಧಾರಣೆಯ ಸಲಹೆಗಳ ಕುರಿತು ಪುಸ್ತಕವನ್ನು ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ಖಾತೆಗಳಿವೆ. ಕೃತಕ ಬುದ್ಧಿಮತ್ತೆ ಉಪಯೋಗಿಸಿ ತಾನೇ ಕಾಣಿಸಿಕೊಂಡು ಪ್ರಚಾರ ನೀಡುತ್ತಿರುವಂತೆ ಬಿಂಬಿಸಲಾಗಿತ್ತು ಎಂದು ಅವರು ದೂರಿದ್ದರು.
ವಾದ ಆಲಿಸಿದ ನ್ಯಾಯಾಲಯ ಸದ್ಗುರು ಜಗ್ಗಿ ವಾಸುದೇವ್ ಅವರು ವಿಶ್ವಾದ್ಯಂತ ಆಧ್ಯಾತ್ಮಿಕ ಮಾರ್ಗದರ್ಶನದ ವಿಶ್ವಾಸಾರ್ಹ ಮೂಲವಾಗಿದ್ದು, ಅವರು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ವ್ಯಕ್ತಿತ್ವದ ದುರುಪಯೋಗ ಅಥವಾ ತಪ್ಪಾದ ನಿರೂಪಣೆ ಅವರ ಖ್ಯಾತಿಗೆ ಮತ್ತು ಅವರ ಮೇಲೆ ಸಾರ್ವಜನಿಕರು ಇರಿಸಿರುವ ನಂಬಿಕೆಗೆ ಹಾನಿ ಉಂಟುಮಾಡುತ್ತದೆ ಎಂದು ನ್ಯಾಯಾಲಯ ತಿಳಿಸಿತು.
ಅಂತರ್ಜಾಲ ಸೇವಾ ಪೂರೈಕೆದಾರರು ಮತ್ತು ಸಾಮಾಜಿಕ ಮಾಧ್ಯಮ ಕಂಪೆನಿಗಳು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವುದಕ್ಕಾಗಿ ಅಧಿಸೂಚನೆ ಹೊರಡಿಸುವಂತೆ ದೂರಸಂಪರ್ಕ ಇಲಾಖೆ ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪೀಠ ನಿರ್ದೇಶನ ನೀಡಿದೆ. ವಂಚಕ ಜಾಲತಾಣಗಳಿಗೆ ಸಮನ್ಸ್ ನೀಡಿರುವ ನ್ಯಾಯಾಲಯ ಅಕ್ಟೋಬರ್ 14ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.