ಪೋಕ್ಸೋ ಪ್ರಕರಣವೊಂದರ ಆರೋಪಿಯ ಮಾನಸಿಕ ಸ್ಥಿತಿಯನ್ನು ಪರಿಗಣಿಸಿದ ದೆಹಲಿ ಹೈಕೋರ್ಟ್ ಆತನಿಗೆ ತನ್ನ ಕೃತ್ಯದ ಅರಿವಿರಲಿಲ್ಲ ಎಂಬುದನ್ನು ಗಮನಿಸಿ ಆತನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಿಂಬಾಲಿಸುವಿಕೆ ಪ್ರಕರಣವನ್ನು ರದ್ದುಗೊಳಿಸಿತು [ಅಮನ್‌ಪ್ರೀತ್ ಸಿಂಗ್ ಬೇಡಿ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ವೈದ್ಯಕೀಯ ಮಂಡಳಿ ಸಿದ್ಧಪಡಿಸಿದ ವರದಿಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಎಫ್ಐಆರ್ ರದ್ದುಗೊಳಿಸಿದ್ದಾರೆ.
ಪ್ರಕರಣ ರದ್ದುಪಡಿಸಲು ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದ ಸಂತ್ರಸ್ತೆಯ ತಂದೆಯೊಂದಿಗೆ ಕೂಡ ನ್ಯಾಯಾಲಯ ಸಂವಹನ ನಡೆಸಿತು.
“ಸಂತ್ರಸ್ತೆಯೊಂದಿಗೆ ಅರ್ಜಿದಾರ ಇರುವುದನ್ನು ಸಿಸಿಟಿವಿ ಬರಹಿರಂಗಪಡಿಸಿರುವುದಾಗಿ ಸರ್ಕಾರದ ಸ್ಥಿತಿಗತಿ ವರದಿಯಲ್ಲಿ ತಿಳಿಸಿದ್ದರೂ ಸಲ್ಲಿಕೆಯಾದ ವೈದ್ಯಕೀಯ ದಾಖಲೆಗಳನ್ನು ಗಮನಿಸಿದರೆ ಅರ್ಜಿದಾರರಿಗೆ ಆತನ ಕೃತ್ಯದ ಬಗ್ಗೆ ಅರಿವಿರಲಿಲ್ಲ ಎಂದು ತಿಳಿದುಬರುತ್ತದೆ” ಎಂಬುದಾಗಿ ನ್ಯಾಯಾಲಯ ನುಡಿದಿದೆ.
ಆರೋಪಿಯನ್ನು ಪ್ರತಿನಿಧಿಸಿದ್ದ ವಕೀಲರು ಆತ ಬೈಪೋಲಾರ್ ಡಿಸಾರ್ಡರ್‌ನ (ಉನ್ಮಾದ ಖಿನ್ನತೆ ಮಾನಸಿ ಅಸ್ವಸ್ಥತೆ) ರೋಗಿಯಾಗಿದ್ದು, ಘಟನೆಯ ದಿನ ಆತನ ಕೃತ್ಯಗಳ ಬಗ್ಗೆ ಆತನಿಗೆ ನಿಯಂತ್ರಣ ಇರಲಿಲ್ಲ ಎಂಬ ಕಾರಣಕ್ಕೆ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದರು. ಈ ವಾದವನ್ನು ವೈದ್ಯಕೀಯ ಮಂಡಳಿಯ ವರದಿ ಕೂಡ ಪುಷ್ಟೀಕರಿಸಿತ್ತು.
ಈ ಹಿನ್ನೆಲೆಯಲ್ಲಿ ವೈದ್ಯಕೀಯ ವರದಿ ಮತ್ತು ಸಂತ್ರಸ್ತೆಯ ತಂದೆಯ ನಿರಾಕ್ಷೇಪಣೆಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಎಫ್‌ಐಆರ್ ರದ್ದುಗೊಳಿಸಿತು.