ಆಂಧ್ರ ಮತದಾರರ ಪಟ್ಟಿ ತಯಾರಿಕೆಗಾಗಿ ಸ್ವಯಂಸೇವಕರ ಬಳಕೆಗೆ ಆಕ್ಷೇಪ: ಪಿಐಎಲ್‌ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

ಈ ಸ್ವಯಂಸೇವಕರು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವಾಗ ಮತ್ತು ತೆಗೆದುಹಾಕುವಾಗ ಅಧಿಕಾರ ದುರುಪಯೋಗವಾಗುತ್ತಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.
ದೆಹಲಿ ಹೈಕೋರ್ಟ್, ಆಂಧ್ರಪ್ರದೇಶ
ದೆಹಲಿ ಹೈಕೋರ್ಟ್, ಆಂಧ್ರಪ್ರದೇಶ
Published on

ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸಲು ಆಂಧ್ರಪ್ರದೇಶದ ಗ್ರಾಮ / ವಾರ್ಡ್ ಸ್ವಯಂಸೇವಕರು ಮತ್ತು ಗ್ರಾಮ / ವಾರ್ಡ್ ಕಾರ್ಯದರ್ಶಿಗಳ ಸೇವೆ ಬಳಸದಂತೆ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಬದಲಿಗೆ ಪ್ರಕರಣ ಆಲಿಸಲು ಆಂಧ್ರ ಪ್ರದೇಶ ಹೈಕೋರ್ಟ್‌ ಸೂಕ್ತ ಎಂದು ಅದು ಅಭಿಪ್ರಾಯಪಟ್ಟಿದೆ.

ಸ್ವಯಂಸೇವಕರು ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಭಾಗವಾಗಿದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಕೂಡ ವಿವಾದದಲ್ಲಿ ಭಾಗಿಯಾಗಿರುವುದರಿಂದ ದೆಹಲಿ ಹೈಕೋರ್ಟ್‌ ರೀತಿಯ "ತಟಸ್ಥ ವೇದಿಕೆ" ಪ್ರಕರಣ ಆಲಿಸುವುದು ಉತ್ತಮ ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ ಎಂಬ ಸರ್ಕಾರೇತರ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಆದರೆ ಈ ವಾದವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ವಿಭಾಗೀಯ ಪೀಠ ತಿರಸ್ಕರಿಸಿತು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ

ತನ್ನ ಕಾರ್ಯದರ್ಶಿಯಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಆಂಧ್ರಪ್ರದೇಶದ ರಾಜ್ಯ ಮಾಜಿ ಚುನಾವಣಾ ಆಯುಕ್ತ ಎನ್ ರಮೇಶ್ ಕುಮಾರ್ ಅವರ ಮೂಲಕ ಈ ಅರ್ಜಿ ಸಲ್ಲಿಸಲಾಗಿತ್ತು.

ರಾಜ್ಯದ ಜನರ ಕುರಿತು ಅಕ್ರಮವಾಗಿ ದತ್ತಾಂಶ ಸಂಗ್ರಹಿಸಲಾಗಿದ್ದು ಮತದಾರರ ಹೆಸರು ಸೇರ್ಪಡೆ ಮಾಡಲು ಅಥವಾ ತೆಗೆದುಹಾಕಲು ಈ ದತ್ತಾಂಶವನ್ನು ಬಳಸುತ್ತಿರುವ ಆಂಧ್ರ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿತ್ತು.

ಅರ್ಹ ಕುಟುಂಬಗಳ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸಲು ಇಡೀ ಆಂಧ್ರಪ್ರದೇಶದಲ್ಲಿ ಸುಮಾರು 50 ಮನೆಗಳಿಗೆ ಒಬ್ಬ ವ್ಯಕ್ತಿಯಂತೆ ಗ್ರಾಮ ಸ್ವಯಂಸೇವಕರನ್ನು ಆಯ್ಕೆ ಮಾಡಲಾಗಿದೆ. ಈ ಸ್ವಯಂಸೇವಕರಲ್ಲಿ ಬಹುತೇಕರು ವೈಎಸ್‌ಆರ್‌ ಕಾಂಗ್ರೆಸ್‌ ಸದಸ್ಯರಾಗಿದ್ದಾರೆ. ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಸಮಾನಂತರವಾಗಿ ಈ ಸ್ವಯಂ ಸೇವಕರನ್ನು ಸಂಘಟಿಸಲಾಗಿದ್ದು ಇದು 73ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ ಕಲ್ಪಿಸಲಾಗಿರುವಂತೆ ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಬೆದರಿಕೆ ಒಡ್ಡುತ್ತಿದೆ. ಆದ್ದರಿಂದ, ಈ ಸ್ವಯಂಸೇವಕರನ್ನು ನೇಮಿಸುವ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಕೋರಿತ್ತು.

ಪ್ರಕರಣ ಆಲಿಸಿದ ನ್ಯಾಯಾಲಯ ಪಿಐಎಲ್‌ ವಿಚಾರಣೆಗೆ ಆಂಧ್ರಪ್ರದೇಶ ಹೈಕೋರ್ಟ್ ಸೂಕ್ತ ಎಂದು ಅಭಿಪ್ರಾಯಪಟ್ಟಿತು.

ಅರ್ಜಿದಾರರು ಈ ಹಿಂದೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾಗ ಹೈಕೋರ್ಟ್‌ ಸಂಪರ್ಕಿಸಲು ಅದು ಸ್ವಾತಂತ್ರ್ಯ ನೀಡಿತ್ತಾದರೂ ದೆಹಲಿ ಹೈಕೋರ್ಟ್‌ ಮುಂದೆ ಅರ್ಜಿ ಸಲ್ಲಿಸಬೇಕು ಎಂದು ಅದು ಎಲ್ಲಿಯೂ ಹೇಳಿರಲಿಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು.

ಇದೇ ವೇಳೆ ಅರ್ಜಿ ಸಮರ್ಥನೀಯವಲ್ಲ ಎಂದು ವಾದಿಸಿದ ಆಂಧ್ರ ಸರ್ಕಾರ ಈಗಾಗಲೇ ಆಂಧ್ರಪ್ರದೇಶ ಹೈಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ ಎಂದಿತ್ತು.

ಇತ್ತ ಚುನಾವಣಾ ಆಯೋಗ ಕೂಡ ಅರ್ಜಿದಾರರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಅರ್ಜಿದಾರರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಇದು ತಟಸ್ಥ ವೇದಿಕೆ ಎಂದು ವಾದಿಸುವುದು ಆಂಧ್ರಪ್ರದೇಶದ ಹೈಕೋರ್ಟ್ ಮೇಲೆ ಅನುಮಾನ ವ್ಯಕ್ತಪಡಿಸಿದಂತಾಗುತ್ತದೆ ಎಂದಿತ್ತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದರು. ಆಂಧ್ರಪ್ರದೇಶ ಸರ್ಕಾರವನ್ನು ಹಿರಿಯ ವಕೀಲ ರಾಜೀವ್ ನಾಯರ್ ಪ್ರತಿನಿಧಿಸಿದ್ದರು. ವಕೀಲ ಸಿದ್ಧಾಂತ್ ಕುಮಾರ್ ಅವರು ಭಾರತದ ಚುನಾವಣಾ ಆಯೋಗದ ಪರ ವಾದ ಮಂಡಿಸಿದ್ದರು.

Kannada Bar & Bench
kannada.barandbench.com