ಕೇಜ್ರಿವಾಲ್ ಹುದ್ದೆಯಲ್ಲಿ ಮುಂದುವರೆಯುವುದು ವೈಯಕ್ತಿಕ ನಿರ್ಧಾರ: ಮತ್ತೊಂದು ಪಿಐಎಲ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

“ಕೆಲವೊಮ್ಮೆ, ವೈಯಕ್ತಿಕ ಹಿತಾಸಕ್ತಿಯು ರಾಷ್ಟ್ರೀಯ ಹಿತಾಸಕ್ತಿಗೆ ಅಧೀನವಾಗಿರಬೇಕು. ಆದರೆ ಅದು ಕೇಜ್ರಿವಾಲ್ ಅವರ ವೈಯಕ್ತಿಕ ನಿರ್ಧಾರ” ಎಂದು ಪೀಠ ಹೇಳಿತು.
Arvind Kejriwal Facebook
Arvind Kejriwal Facebook

ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ  (ಪಿಐಎಲ್) ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಹಿಂದೂ ಸೇನಾ ಎಂಬ ಸಂಘಟನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿರುವುದರಿಂದ ಅವರನ್ನು ಪದಚ್ಯುತಗೊಳಿಸುವಂತೆ ಗುಪ್ತಾ ಮನವಿ ಮಾಡಿದ್ದರು.

ಆದರೆ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಹುದ್ದೆಯಲ್ಲಿ ಮುಂದುವರೆಯಬೇಕೆ ಅಥವಾ ಬೇಡವೇ ಎಂಬುದು ಕೇಜ್ರಿವಾಲ್‌ ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿತು.

ಈ ಪ್ರಕರಣವನ್ನು ನಿರ್ಧರಿಸುವುದು ನ್ಯಾಯಾಲಯದಿಂದ ಸಾಧ್ಯವಿಲ್ಲ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಅಥವಾ ಭಾರತದ ರಾಷ್ಟ್ರಪತಿ ಈ ಕುರಿತು ನಿರ್ಧರಿಸಬೇಕು ಎಂದು ಅದು ಸ್ಪಷ್ಟಪಡಿಸಿತು.

"ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಾವು ಹೇಗೆ ಘೋಷಿಸಲು ಸಾಧ? ಅದನ್ನು ನಿರ್ಧರಿಸಲು ಲೆಫ್ಟಿನೆಂಟ್‌ ಗವರ್ನರ್‌ ಸಂಪೂರ್ಣ ಸಮರ್ಥರು. ಅವರಿಗೆ  ನಮ್ಮ ಮಾರ್ಗದರ್ಶನ ಅಗತ್ಯವಿಲ್ಲ. ಅವರಿಗೆ ಸಲಹೆ ನೀಡಲು ನಾವು ಯಾರೂ ಅಲ್ಲ. ಅವರು ಕಾನೂನಿನ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತಾರೆ," ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯ ಪ್ರಕರಣದಲ್ಲಿ ಮಧ್ಯಪ್ರವೇಶಿಸಲಾಗದು. ಅರ್ಜಿದಾರರು ಬಯಸಿದ ಪರಿಹಾರ ಭಾರತದ ರಾಷ್ಟ್ರಪತಿ ಇಲ್ಲವೇ ಲೆ. ಗವರ್ನರ್‌ ಅವರೆದುರು ಇದೆ. ಹೀಗಾಗಿ ಅರ್ಜಿದಾರರು ಸಂಬಂಧಪಟ್ಟವರನ್ನು ಸಂಪರ್ಕಿಸಬಹುದು ಎಂದಿತು. ಬಳಿಕ ಅರ್ಜಿದಾರರು ಮನವಿ ಹಿಂಪಡೆದರು.

ವಿಶೇಷ ಎಂದರೆ ಕೇಜ್ರಿವಾಲ್‌ ಪದಚ್ಯುತಿ ಕೋರಿ ಸಲ್ಲಿಸಿದ್ದ ಪಿಐಎಲ್‌ ಅನ್ನು ಹೈಕೋರ್ಟ್‌ ವಜಾಗೊಳಿಸುತ್ತಿರುವುದು ಇದು ಎರಡನೇ ಬಾರಿ., ಸುರ್ಜಿತ್ ಸಿಂಗ್ ಯಾದವ್ ಎಂಬುವವರು ಸಲ್ಲಿಸಿದ್ದ ಇದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಮಾರ್ಚ್ 28ರಂದು ತಿರಸ್ಕರಿಸಿತ್ತು. ಆಗಲೂ ಭಾರತದ ರಾಷ್ಟ್ರಪತಿ ಅಥವಾ ಲೆ. ಗವರ್ನರ್‌ ಅವರೇ ಈ ಕುರಿತು ನಿರ್ಧರಿಸಬೇಕು ಎಂದು ಅದು ನುಡಿದಿತ್ತು.

Related Stories

No stories found.
Kannada Bar & Bench
kannada.barandbench.com