ಜಾತಿಯತೆ ವಿರುದ್ಧ ಪ್ರತಿಭಟನೆ: ದೆಹಲಿ ವಿವಿ ದಲಿತ ಪ್ರಾಧ್ಯಾಪಕಿ ಹೊರಕಳಿಸುವ ಆದೇಶ ನೀಡಲು ಹೈಕೋರ್ಟ್‌ ನಕಾರ

ಪ್ರಕರಣ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದು ವಿಶ್ವವಿದ್ಯಾಲಯ ಪೊಲೀಸರಿಗೆ ದೂರು ಸಲ್ಲಿಸಬಹುದಾಗಿದೆ. ಅವರು ಕಾನೂನು ಪ್ರಕಾರ ಕ್ರಮಕೈಗೊಳ್ಳಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ದೆಹಲಿ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ
ದೆಹಲಿ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ

ದೆಹಲಿ ವಿವಿಯಲ್ಲಿನ ಜಾತಿವಾದ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ದಲಿತ ಪ್ರೊಫೆಸರ್ ರಿತು ಸಿಂಗ್ ಮತ್ತು ಅವರ ಬೆಂಬಲಿಗರನ್ನು ವಿವಿಯ ಕಲಾ ವಿಭಾಗದ ಆವರಣದದಿಂದ ಹೊರಗೆ ಕಳುಹಿಸಲು ನಿರ್ದೇಶನ ನೀಡುವುದಕ್ಕೆ ದೆಹಲಿ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.  

ಸಿಂಗ್ ಅವರನ್ನು ಸ್ಥಳದಿಂದ ತೆಗೆದುಹಾಕಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ವಿಶ್ವವಿದ್ಯಾಲಯ ಆಡಳಿತ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ವಿಲೇವಾರಿ ಮಾಡಿದರು.

ಪ್ರಕರಣ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದು ವಿಶ್ವವಿದ್ಯಾಲಯ ಪೊಲೀಸರಿಗೆ ದೂರು ಸಲ್ಲಿಸಬಹುದಾಗಿದೆ. ಅವರು ಕಾನೂನು ಪ್ರಕಾರ ಕ್ರಮಕೈಗೊಳ್ಳಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್
ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್

ದೆಹಲಿ ವಿಶ್ವವಿದ್ಯಾಲಯದಲ್ಲಿ ಜಾತಿವಾದ ಇದೆ ಎಂದು ಆರೋಪಿಸಿ ಪ್ರೊ. ಸಿಂಗ್ ಕಳೆದ ಐದು ತಿಂಗಳಿಗೂ ಹೆಚ್ಚು ಅವಧಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು 2019ರಲ್ಲಿ ದೌಲತ್‌ರಾಮ್‌ ಕಾಲೇಜಿಗೆ ತಾತ್ಕಾಲಿಕ ಮನೋವಿಜ್ಞಾನ ಪ್ರಾಧ್ಯಾಪಕರಾಗಿ ಸೇರ್ಪಡೆಯಾಗಿದ್ದರು. ಆದರೆ ಒಂದು ವರ್ಷದೊಳಗೆ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತಲ್ಲದೆ ಒಪ್ಪಂದ ನವೀಕರಿಸಲಿಲ್ಲ.

28 ವರ್ಷದ ಪ್ರಾಧ್ಯಾಪಕಿ ನಡೆಸುತ್ತಿರುವ ಪ್ರತಿಭಟನೆಗೆ ಭೀಮ್ ಆರ್ಮಿ, ಪಂಜಾಬ್‌ ರೈತರು ಮತ್ತಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಪ್ರೊ. ರಿತು ಮತ್ತವರ ಬೆಂಬಲಿಗರು ದೆಹಲಿ ವಿವಿಯ ಉತ್ತರ ಕ್ಯಾಂಪಸ್‌ನ ಅತಿದೊಡ್ಡ ಜಾಗವನ್ನು ಅತಿಕ್ರಮಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದು ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ವಿವಿ ಪ್ರವೇಶಿಸಲು ಅನಾನುಕೂಲವಾಗಿದೆ. ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ವೈಯಕ್ತಿಕ ಆರೋಪಗಳನ್ನು ಮುಂದುವರಿಸಿದ್ದಾರೆ ಮತ್ತು ಉಪಕುಲಪತಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೆಹಲಿ ವಿವಿ ನ್ಯಾಯಾಲಯದ ಮೊರೆ ಹೋಗಿತ್ತು.

ಈ ಪ್ರದೇಶದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಪ್ರತಿಭಟನಾಕಾರರನ್ನು ತೆಗೆದುಹಾಕಲು ದೆಹಲಿ ಪೊಲೀಸರು ವಿಫಲರಾಗಿದ್ದಾರೆ. ಪ್ರತಿಭಟನಾಕಾರರು ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಅಂಟಿಸುವ ಮೂಲಕ ಉತ್ತರ ಕ್ಯಾಂಪಸ್‌ ಗೋಡೆಗಳನ್ನು ವಿರೂಪಗೊಳಿಸಿದ್ದಾರೆ ಎಂದು ವಿವಿ ಪರವಾಗಿ ಹಾಜರಾದ ವಕೀಲೆ ಮೋನಿಕಾ ಅರೋರಾ ನ್ಯಾಯಪೀಠಕ್ಕೆ ತಿಳಿಸಿದರು.

ಪ್ರೊಫೆಸರ್ ಸಿಂಗ್ ಪರವಾಗಿ ಹಾಜರಿದ್ದ ವಕೀಲ ಮೆಹಮೂದ್ ಪ್ರಾಚಾ ಅವರು ಆರೋಪಗಳನ್ನು ನಿರಾಕರಿಸಿದರು. ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ ಎಂದು ಅವರು ಹೇಳಿದರು.

ದೆಹಲಿ ಪೊಲೀಸರಂತಹ ಸರ್ಕಾರದ ಮತ್ತೊಂದು ಅಂಗದ ವಿರುದ್ಧ ನಿರ್ದೇಶನಗಳನ್ನು ಕೋರಿದ ಸರ್ಕಾರದ ಇನ್ನೊಂದು ಅಂಗವಾದ ದೆಹಲಿ ವಿಶ್ವವಿದ್ಯಾಲಯದ ಬಗ್ಗೆ ನ್ಯಾಯಮೂರ್ತಿ ಪ್ರಸಾದ್ ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ಅಂತಹ ನಿರ್ದೇಶನಗಳನ್ನು ನೀಡುವುದು ಬಹಳ ತಪ್ಪು ನಿದರ್ಶನಗಳಿಗೆ ಕಾರಣವಾಗುತ್ತದೆ ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

Related Stories

No stories found.
Kannada Bar & Bench
kannada.barandbench.com