ಗೃಹಬಂಧನಕ್ಕೆ ಕೋರಿದ್ದ ಬಂಧಿತ ಪಿಎಫ್ಐ ಮಾಜಿ ಮುಖ್ಯಸ್ಥನ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ತಾವು ನಿವೃತ್ತ ಶಿಕ್ಷಕರಾಗಿದ್ದು ಕ್ಯಾನ್ಸರ್, ಪಾರ್ಕಿನ್ಸನ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವಯೋವೃದ್ಧನಾಗಿರುವುದರಿಂದ ತನಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡುವಂತೆ ಅಬೂಬಕರ್ ಕೋರಿದ್ದರು.
Delhi High Court
Delhi High Court
Published on

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮಾಜಿ ಮುಖ್ಯಸ್ಥ ಎರಪುಂಗಲ್ ಅಬೂಬಕರ್ ಅವರನ್ನು ಜೈಲಿನ ಬದಲು ಗೃಹಬಂಧನದಲ್ಲಿ ಇರಿಸಲು ಆದೇಶ  ನೀಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.

ಆದರೆ ವೈದ್ಯಕೀಯ ಕಾರಣಗಳಿಗಾಗಿ ಮತ್ತು ಉತ್ತಮ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡುವಂತೆ ಅಬೂಬಕರ್‌ ಸಲ್ಲಿಸಿದ್ದ ಮನವಿ ಪರಿಗಣಿಸುವುದಾಗಿ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಪ್ರಕರಣದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಅಬೂಬಕರ್‌ ಅವರ ಕಾಯಿಲೆ ಕುರಿತ ಮಾಹಿತಿ ಮತ್ತು ಚಿಕಿತ್ಸೆಯ ಅಗತ್ಯತೆಗಳ ಬಗ್ಗೆ ತಿಳಿಸುವಂತೆ ಎನ್‌ಐಎ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಎಐಐಎಂಎಸ್‌) ಅದು ಸೂಚಿಸಿದೆ.

Also Read
ಪಿಎಫ್‌ಐ ನಿಷೇಧ: ಕೇಂದ್ರ ಸರ್ಕಾರದಿಂದ ಸಮರ್ಥನೆ, ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಕೇರಳದ ಕೋರಿಕ್ಕೋಡ್‌ ಸಮೀಪದ ಹಳ್ಳಿಯೊಂದರಿಂದ ಬಂದಿರುವ ಅಬೂಬಕರ್, ಐಡಿಯಲ್ ಸ್ಟೂಡೆಂಟ್ಸ್ ಲೀಗ್, ಜಮಾತ್-ಎ-ಇಸ್ಲಾಮಿ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ನಂತಹ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಅವರನ್ನು ಕಳೆದ ಸೆಪ್ಟೆಂಬರ್ 22ರಂದು ಎನ್ಐಎ ಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)  ಅಡಿ ಆರೋಪ ಹೊರಿಸಿತ್ತು. ಅಕ್ಟೋಬರ್ 6ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾವು ನಿವೃತ್ತ ಶಿಕ್ಷಕರಾಗಿದ್ದು  ಕ್ಯಾನ್ಸರ್‌, ಪಾರ್ಕಿನ್ಸನ್‌ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವಯೋವೃದ್ಧನಾಗಿರುವುದರಿಂದ ತನಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡುವಂತೆ ಅಬೂಬಕರ್‌ ಕೋರಿದ್ದರು.  

Kannada Bar & Bench
kannada.barandbench.com