ಕೋಮು ಹೇಳಿಕೆ: ಬಿಜೆಪಿಯ ಕಪಿಲ್ ಮಿಶ್ರಾ ವಿರುದ್ಧದ ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಕುತೂಹಲಕಾರಿ ಅಂಶವೆಂದರೆ, ಆರೋಪ ನಿಗದಿಪಡಿಸುವ ಹಂತದಲ್ಲಿ ಕಪಿಲ್‌ ಅವರನ್ನು ವಿಚಾರಣಾ ನ್ಯಾಯಾಲಯ ದೋಷಮುಕ್ತಗೊಳಿಸುವ ಸಾಧ್ಯತೆಯಿದೆ ಎಂದಿದೆ.
Kapil Mishra, Delhi High Court
Kapil Mishra, Delhi High CourtImage source: Facebook
Published on

ದೆಹಲಿ ವಿಧಾನಸಭೆಗೆ ನಡೆದ 2020ರ ಚುನಾವಣೆ ವೇಳೆ ಮತ ಯಾಚಿಸಲು ಕೋಮು ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ  ಅವರ ವಿರುದ್ಧ ಹೂಡಲಾಗಿರುವ ಚುನಾವಣಾ ದುಷ್ಕೃತ್ಯ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸದಂತೆ ತಡೆ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ಮಿಶ್ರಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ತಿಳಿದುಬಂದಿತ್ತು.

ದೆಹಲಿ ಮಿನಿ ಪಾಕಿಸ್ತಾನವಾಗಲಿದೆ. ಶಹೀನ್‌ ಬಾಗ್‌ ಪಾಕಿಸ್ತಾನದ ಹೆಬ್ಬಾಗಿಲಾಗಲಿದೆ ಎಂದು ಮಿಶ್ರಾ ಅವರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿಕೆ ನೀಡಿರುವುದು ದ್ವೇಷ ಬಿತ್ತಲಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜನ ಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 125ರ ಅಡಿ ಪ್ರಕರಣ ದಾಖಲಿಸಲಾಗಿತ್ತು.

 ಈ ಸಂಬಂಧ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜೂನ್ 2024ರಲ್ಲಿ ಮಿಶ್ರಾ ಅವರಿಗೆ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಸಮನ್ಸ್‌ ರದ್ದುಗೊಳಿಸಲು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್  ಮಾರ್ಚ್ 7ರಂದು ನಿರಾಕರಿಸಿದ್ದರು. ಜೊತೆಗೆ ಕಪಿಲ್‌ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದರು. ಇದನ್ನು ಕಪಿಲ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಅರ್ಜಿ ವಜಾ ಮಾಡುವ ಅಗತ್ಯವಿಲ್ಲ ಎಂದು ಇಂದಿನ ವಿಚಾರಣೆ ವೇಳೆ ಹೈಕೋರ್ಟ್‌ ತಿಳಿಸಿದೆ. ಕುತೂಹಲಕಾರಿ ಅಂಶವೆಂದರೆ, ಆರೋಪ ನಿಗದಿಪಡಿಸುವ ಹಂತದಲ್ಲಿ ಕಪಿಲ್‌ ಅವರನ್ನು ವಿಚಾರಣಾ ನ್ಯಾಯಾಲಯ  ದೋಷಮುಕ್ತಗೊಳಿಸುವ ಸಾಧ್ಯತೆಯಿದೆ ಎಂದಿದೆ.

ವಿಚಾರಣೆಗೆ ತಡೆ ನೀಡುವ ಅಗತ್ಯವಿಲ್ಲ. ಆರೋಪ ಹೊರಿಸುವ ಹಂತದಲ್ಲಿ ನಿಮ್ಮನ್ನು (ಕಪಿಲ್‌ ಮಿಶ್ರಾ) ಬಿಡುಗಡೆ ಮಾಡುವ ಸಾಧ್ಯತೆಯಿದೆ.

ದೆಹಲಿ ಹೈಕೋರ್ಟ್

ಮಿಶ್ರಾ ಪರವಾಗಿ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ಮೇ 19 ರಂದು ನಡೆಯಲಿದೆ.

Kannada Bar & Bench
kannada.barandbench.com