ವಿಮಾನಯಾನ ದರ ಕಡಿವಾಣಕ್ಕೆ ದೆಹಲಿ ಹೈಕೋರ್ಟ್ ನಕಾರ: ವಿಮಾನಕ್ಕಿಂತಲೂ ರಿಕ್ಷಾ ದರ ದುಬಾರಿ ಎಂದ ನ್ಯಾಯಾಲಯ

ಇಂದು ವಿಮಾನಯಾನ ಉದ್ಯಮ ತುಂಬಾ ಸ್ಪರ್ಧಾತ್ಮಕವಾಗಿದ್ದು ದರ ನಿಯಂತ್ರಿಸಲು ನಿರ್ದೇಶನ ನೀಡುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ವಿಮಾನಯಾನ ದರ ಕಡಿವಾಣಕ್ಕೆ ದೆಹಲಿ ಹೈಕೋರ್ಟ್ ನಕಾರ: ವಿಮಾನಕ್ಕಿಂತಲೂ ರಿಕ್ಷಾ ದರ ದುಬಾರಿ ಎಂದ ನ್ಯಾಯಾಲಯ

ಇಂದು ವಿಮಾನಯಾನ ಉದ್ಯಮ ಉತ್ತಮ ರೀತಿಯಲ್ಲಿ ನಿಯಂತ್ರಿತವಾಗುತ್ತಿದ್ದು ದರಕ್ಕೆ ಕಡಿವಾಣ ಹಾಕಲು ನ್ಯಾಯಾಲಯ ನಿರ್ದೇಶನ ನೀಡುವುದು ಸೂಕ್ತವಲ್ಲ ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.

ಆ ಮೂಲಕ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ  ವಿಮಾನ ಟಿಕೆಟ್‌ಗಳ ದರವನ್ನು ನಿಯಂತ್ರಿಸುವ ಎರಡು ಅರ್ಜಿಗಳನ್ನು ವಿಲೇವಾರಿ ಮಾಡಿದೆ.

ಬಿಡಿಯಾದ ಘಟನೆಗಳು ನ್ಯಾಯಾಲಯವನ್ನು ಪ್ರಕರಣದ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಪರಿಗಣಿಸುವಂತೆ ಮಾಡುವ ಅಗತ್ಯವಿಲ್ಲ. ಇಡೀ ವಿಮಾನಯಾನ ಕ್ಷೇತ್ರವನ್ನು ಯಾವುದೇ ಹೊಸ ನಿಯಂತ್ರಣದ ಅಡಿ ತರಬೇಕಿಲ್ಲ ಎಂದು ಪೀಠ ಟೀಕಿಸಿತು.

ವಿಮಾನಯಾನ ಕ್ಷೇತ್ರದಲ್ಲಿ ಸ್ಪರ್ಧೆ ಇರುವುದನ್ನು ಪ್ರಸ್ತಾಪಿಸಿದ ನ್ಯಾಯಾಲಯ ಆಟೋರಿಕ್ಷಾ ದರ ವಿಮಾನಯಾನಕ್ಕಿಂತಲೂ ದುಬಾರಿಯಾದುದು ಎಂದು ಮೌಖಿಕವಾಗಿ ಹೇಳಿತು. ತಾನು ಯಾವುದೇ ನಿರ್ದೇಶನ ನೀಡದೆ ಪಿಐಎಲ್‌ ವಿಲೇವಾರಿ ಮಾಡುತ್ತಿರುವುದಾಗಿ ಅದು ತಿಳಿಸಿತು.

ವಕೀಲ ಅಮಿತ್ ಸಾಹ್ನಿ ಮತ್ತು ಬೇಜೋನ್ ಕುಮಾರ್ ಮಿಶ್ರಾ ಎಂಬುವವರು ಅರ್ಜಿ ಸಲ್ಲಿಸಿದ್ದರು. ಗ್ರಾಹಕರ ಮೇಲೆ ಮನಬಂದಂತೆ ದರ ವಿಧಿಸಲು ವಿಮಾನಯಾನ ಸಂಸ್ಥೆಗಳಿಗೆ ಸಾಧ್ಯವಾಗದಂತೆ ದರಗಳನ್ನು ನಿಯಂತ್ರಿಸಬೇಕು ಎಂದು ಅವರು ಕೋರಿದ್ದರು.

ಮಾರ್ಗಸೂಚಿಗಳನ್ನು ರೂಪಿಸಿ ವಿಮಾನಯಾನ ಕಂಪನಿಗಳು ಅತಾರ್ಕಿಕವಾಗಿ, ವಿಪರೀತವಾಗಿ ವಿಮಾನಗಳಿಗೆ ಶುಲ್ಕ ವಿಧಿಸದಂತೆ ತಡೆ ನೀಡಬೇಕೆಂದು ಸಾಹ್ನಿ ನ್ಯಾಯಾಲಯವನ್ನು ಕೋರಿದ್ದರು.

ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ವಿಮಾನ ಟಿಕೆಟ್‌ಗಳ ಬೆಲೆಗಳನ್ನು ಮಿತಿಗೊಳಿಸುವಂತೆ ಮಿಶ್ರಾ ನ್ಯಾಯಾಲಯವನ್ನು ಕೋರಿದ್ದರು. ಜೆಟ್ ಏರ್‌ವೇಸ್ ವಿಮಾನಗಳ ಸ್ಥಗಿತದಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಹಣ ಮರುಪಾವತಿಯಾಗಬೇಕು. ಜೊತೆಗೆ ಸಾಕಷ್ಟು ಪರಿಹಾರವನ್ನು ನೀಡಬೇಕು ಎಂದು ಕೋರಿ ಅವರು ಅರ್ಜಿ ಸಲ್ಲಿಸಿದ್ದರು.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪರವಾಗಿ ಹಾಜರಾದ ವಕೀಲೆ ಅಂಜನಾ ಗೋಸೈನ್ ಪ್ರಾಧಿಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಅಫಿಡವಿಟ್‌ ಸಲ್ಲಿಸಿದೆ ಎಂದರು.

ವಿಮಾನಯಾನ ದರ ನಿಗದಿಯು ಮಾರ್ಗಗಳು ಮತ್ತು ವಿಮಾನಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ. ಕೆಲವೊಮ್ಮೆ, ವಿಮಾನಗಳಲ್ಲಿ ಮೂವರು ಪ್ರಯಾಣಿಕರಿದ್ದರೂ ಅವರನ್ನು ಕರೆದೊಯ್ಯಬೇಕಾಗುತ್ತದೆ ಎಂದು ಅವರು ಹೇಳಿದರು. ವಾದ ಪರಿಗಣಿಸಿದ ನ್ಯಾಯಾಲಯ ಪಿಐಎಲ್‌ಗಳನ್ನು ವಿಲೇವಾರಿ ಮಾಡಿತು.

Kannada Bar & Bench
kannada.barandbench.com