ಎಲ್ಲಾ ಭಾರತೀಯ ವಿಮಾನಗಳಲ್ಲಿ ಬರೆಯಲಾಗಿರುವ ವಿಕ್ಟೋರಿಯನ್ ಟೆರಿಟರಿ / ವೈಸರಾಯ್ ಟೆರಿಟರಿ (ವಿಟಿ) ಎಂಬ ಕಾಲ್ ಸೈನ್ (ಸಂವಹನ ನೋಂದಣಿ ಸಂಕೇತ) ತೆಗೆದುಹಾಕುವಂತೆ ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಇದು ನ್ಯಾಯಾಲಯ ವ್ಯವಹರಿಸಬೇಕಾದ ಅರ್ಜಿಯಲ್ಲ ಇಂತಹ ಮನವಿಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಾತ್ರ ಕಾರ್ಯ ನಿರ್ವಹಿಸಬೇಕಿರುವುದರಿಂದ ಅದನ್ನು ಸಂಪರ್ಕಿಸುವಂತೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯನ್ ಪ್ರಸಾದ್ ಅವರಿದ್ದ ಪೀಠ ಅರ್ಜಿದಾರರಿಗೆ ಹೇಳಿತು.
"...ಇಲ್ಲಿ ಕಾನೂನಿನ ಸಮಸ್ಯೆ ಏನಿದೆ? ಇದನ್ನು ಸರ್ಕಾರ ಮಾಡಬೇಕು. ಅವರು ಶಾಸನ ರೂಪಿಸುವವರು. ಇದು ನೀತಿ ನಿರ್ಧಾರದ ವಿಚಾರ. ಇದನ್ನು ಮಾಡಲು ನಮಗೆ ಸಾಧ್ಯವಿಲ್ಲ’’ ಎಂದು ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಶರ್ಮಾ ಅಭಿಪ್ರಾಯಪಟ್ಟರು. ಆನಂತರ ಉಪಾಧ್ಯಾಯ ಅವರು ಅರ್ಜಿ ಹಿಂಪಡೆದರು.
ದೇಶದ ಭದ್ರತೆ, ಸಾರ್ವಭೌಮತ್ವ, ಸ್ವಾತಂತ್ರ್ಯದ ಹಕ್ಕು, ಘನತೆಯ ಹಕ್ಕು ಹಾಗೂ ನ್ಯಾಯಿಕ ಆಡಳಿತಕ್ಕಾಗಿ ಈ ಚಿಹ್ನೆ ತೆಗೆದು ಹಾಕುವುದು ಅಗತ್ಯ ಎಂದು ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. ಈ ಸಂಕೇತ ವಿಮಾನಗಳ ಹಿಂಭಾಗದ ನಿರ್ಗಮನ ಬಾಗಿಲ ಮತ್ತು ಕಿಟಕಿಗಳ ಮೇಲೆ ಕಂಡುಬರುತ್ತದೆ. ತನ್ನೆಲ್ಲಾ ವಸಾಹತುಶಾಹಿಗಳಿಗೆ ಬ್ರಿಟನ್ ʼವಿಟಿʼ ಚಿಹ್ನೆ ಅಳವಡಿಸಿತ್ತು. ಆದರೆ ಚೀನಾ, ಪಾಕಿಸ್ತಾನ, ನೇಪಾಳ ಶ್ರೀಲಂಕಾದಂತಹ ದೇಶಗಳು ಆ ಚಿಹ್ನೆಯನ್ನು ಬದಲಿಸಿದವು. ಆದರೆ ಭಾರತದಲ್ಲಿ ಅದು ಹಾಗೆಯೇ ಉಳಿದಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.