
ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತ ಶಿವಲಿಂಗದ ಕುರಿತು ಎಕ್ಸ್ ಖಾತೆಯಲ್ಲಿ ವಿವಾದಾತ್ಮಕ ಹೇಳಕೆ ನೀಡಿದ್ದ ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದತಿಗೆ ದೆಹಲಿ ಹೈಕೋರ್ಟ್ ನಿರಾಕರಿಸಿದೆ [ಡಾ. ರತನ್ ಲಾಲ್ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಇದು ಶಿವಲಿಂಗವಾಗಿದ್ದರೆ ಶಿವನೂ ಸುನ್ನತಿ ಮಡಿಸಿಕೊಂಡಂತೆ ತೋರುತ್ತದೆ ಎಂದು ಪ್ರಾಧ್ಯಾಪಕನ ಎಕ್ಸ್ ಖಾತೆಯಲ್ಲಿ ಹೇಳಲಾಗಿತ್ತು.
ಆರೋಪಿ ಪ್ರಾಧ್ಯಾಪಕನ ಹೇಳಿಕೆ ಮೇಲ್ನೋಟಕ್ಕೆ ಧಾರ್ಮಿಕ ಭಾವನೆ ಘಾಸಿಗೊಳಿಸುವ ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಉದ್ದೇಶದಿಂದ ಕೂಡಿದೆ ಎಂದು ನ್ಯಾ. ಚಂದ್ರಧಾರಿ ಸಿಂಗ್ ತಿಳಿಸಿದರು.
ಮೇಲ್ನೋಟಕ್ಕೆ ಅರ್ಜಿದಾರರು ಸಮಾಜದ ಸಾಮರಸ್ಯವನ್ನು ಕದಡಿದ್ದಾರೆ ಮತ್ತು ಬಹುಜನರ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಈ ಟ್ವೀಟ್ / ಪೋಸ್ಟ್ ಮಾಡಲಾಗಿದೆ ಎಂಬುದಾಗಿ ತಿಳಿಸಿದ ಪೀಠ ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಸಹಾಯಕ ಪ್ರಾಧ್ಯಾಪಕ ಮಾಡಿದ್ದ ಮನವಿಯನ್ನು ವಜಾಗೊಳಿಸಿತು.
ಇದೇ ವೇಳೆ ನ್ಯಾಯಾಲಯ ವಾಕ್ ಸ್ವಾತಂತ್ರ್ಯ ಸಂಪೂರ್ಣ ಆತ್ಯಂತಿಕವಲ್ಲ ಎಂದು ಕೂಡ ತಿಳಿಸಿದೆ.
"ಪ್ರಾಧ್ಯಾಪಕ, ಶಿಕ್ಷಕ ಅಥವಾ ಬುದ್ಧಿಜೀವಿಯಾಗಿರುವ ಯಾವುದೇ ವ್ಯಕ್ತಿಗೆ ಆ ರೀತಿಯ ಹೇಳಿಕೆ, ಟ್ವೀಟ್ ಅಥವಾ ಪೋಸ್ಟ್ ಪ್ರಕಟಿಸುವ ಹಕ್ಕು ಇಲ್ಲ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಯಾವುದೇ ರೀತಿಯ ಸ್ವಾತಂತ್ರ್ಯ ಆತ್ಯಂತಿಕವಲ್ಲ” ಎಂದು ಅದು ಹೇಳಿದೆ.
ಶಿವಲಿಂಗದ ವ್ಯುತ್ಪತ್ತಿ ಮತ್ತು ಪರಿಕಲ್ಪನೆಯನ್ನು ವಿವರಿಸಲು 'ಶಿವ ಪುರಾಣ, ವಿಧ್ವೇಶ್ವರ ಸಂಹಿತಾ'ವನ್ನುಉಲ್ಲೇಖಿಸಿದ ನ್ಯಾಯಮೂರ್ತಿಗಳು ಜೊತೆಗೆ ಧರ್ಮಗ್ರಂಥಗಳ ಕೆಲವು ಶ್ಲೋಕಗಳನ್ನು ಉಲ್ಲೇಖಿಸಿದರು. ಅಂತೆಯೇ “ಅರ್ಜಿದಾರರು ಮಾಡಿದ ಕೃತ್ಯ ಮತ್ತು ಟೀಕೆಗಳು ಶಿವ/ಶಿವಲಿಂಗದ ಆರಾಧಕರು ಮತ್ತು ಭಕ್ತರು ಅನುಸರಿಸುವ ಮತ್ತು ಆಚರಿಸುವ ನಂಬಿಕೆಗಳು ಮತ್ತು ಪದ್ಧತಿಗಳಿಗೆ ವಿರುದ್ಧವಾಗಿರುವುದು ಸ್ಪಷ್ಟ” ಎಂದರು.
ಸಾಮಾಜಿಕ ಮಾಧ್ಯಮದ ಹೇಳಿಕೆ ದೂರುದಾರರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದಲ್ಲದೆ, ಎರಡು ವಿಭಿನ್ನ ಸಮುದಾಯಗಳ ನಡುವೆ ದ್ವೇಷ, ದ್ವೇಷ ಮತ್ತು ಕೋಮು ಉದ್ವಿಗ್ನತೆಯನ್ನು ಉತ್ತೇಜಿಸುತ್ತದೆ ಎಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಈ ಹಿಂದೆ ದೆಹಲಿ ನ್ಯಾಯಾಲಯ ಪ್ರಾಧ್ಯಾಪಕನಿಗೆ ಜಾಮೀನು ನೀಡಿತ್ತು. ವೀಸಾ ಹಾಗೂ ಬಡ್ತಿಗೆ ತೊಂದರೆ ಉಂಟಾಗುವುದರಿಂದ ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಡಿಸೆಂಬರ್ 17ರಂದು ಆದೇಶ ಹೊರಡಿಸಿರುವ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದೆ.