ಇ ಡಿ ಬಂಧನ ಹಾಗೂ ವಶಕ್ಕೆ ನೀಡಿದ್ದ ಆದೇಶ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಹಾಗೂ ತನ್ನನ್ನು ಇಡಿ ಕಸ್ಟಡಿಗೆ ನೀಡಿರುವುದಕ್ಕೆ ಆಕ್ಷೇಪಿಸಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಮೇಲ್ಮನವಿ ಸಲ್ಲಿಸಿದ್ದರು.
Arvind Kejriwal, ED and Delhi High Court
Arvind Kejriwal, ED and Delhi High Court

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಹಾಗೂ ತನ್ನನ್ನು ಇಡಿ ಕಸ್ಟಡಿಗೆ ನೀಡಿರುವುದನ್ನು ಆಕ್ಷೇಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಪ್ರಕರಣದ ಸಂಬಂಧ ಸುದೀರ್ಘ ವಾದ, ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಏಪ್ರಿಲ್ 3 ರಂದು ತೀರ್ಪನ್ನು ಕಾಯ್ದಿರಿಸಿದ್ದರು.

ಇಂದು ತೀರ್ಪು ನೀಡುವ ವೇಳೆ ಪೀಠವು "ನ್ಯಾಯಾಧೀಶರು ಕಾನೂನಿಗೆ ಬದ್ಧರಾಗಿರುತ್ತಾರೆಯೇ ಹೊರತು ರಾಜಕೀಯಕ್ಕಲ್ಲ ಎಂದು ನಾವು ಭಾವಿಸುತ್ತೇವೆ. ತೀರ್ಪುಗಳನ್ನು ಕಾನೂನಿನ ತತ್ವಗಳ ಆಧಾರದಲ್ಲಿ ನೀಡಲಾಗುತ್ತದೆಯೇ ಹೊರತು ರಾಜಕೀಯ ಪರಿಗಣನೆಗಳ ಮೇಲಲ್ಲ. ನ್ಯಾಯಾಲಯವು ರಾಜಕೀಯದ ವ್ಯಾಪ್ತಿಗೆ ಹೋಗಲು ಸಾಧ್ಯವಿಲ್ಲ," ಎಂದಿತು.

ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಆದೇಶ ಸೇರಿದಂತೆ ವಿಚಾರಣಾ ನ್ಯಾಯಾಲಯ ನೀಡಿರುವ ರಿಮಾಂಡ್ ಆದೇಶಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಕೇಜ್ರಿವಾಲ್‌ ಅವರನ್ನು ಬಂಧಿಸಿರುವ ಸಂದರ್ಭದ ಕುರಿತಾಗಿ ಎತ್ತಿದ್ದ ಪ್ರಶ್ನೆಗೂ ನ್ಯಾಯಾಲಯವು ತನ್ನ ಆದೇಶದಲ್ಲಿ ಪ್ರತಿಕ್ರಿಯಿಸಿದ್ದು, "ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಅವರ ಬಂಧನ ಮತ್ತು ರಿಮಾಂಡ್ ಆದೇಶಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕೇ ಹೊರತು ಚುನಾವಣಾ ಸಮಯ, ಸಂದರ್ಭದ ಅನುಸಾರವಲ್ಲ ಎನ್ನುವುದು ಈ ನ್ಯಾಯಾಲಯದ ಅಭಿಪ್ರಾಯವಾಗಿದೆ. ಕೇಜ್ರಿವಾಲ್ ಅವರಿಗೆ ಲೋಕಸಭಾ ಚುನಾವಣೆಯ ದಿನಾಂಕಗಳ ಬಗ್ಗೆ ತಿಳಿದಿರಬೇಕು, ಚುನಾವಣೆ ಯಾವಾಗ ನಡೆಯಲಿದೆ ಎಂದು ಅವರಿಗೆ ಗೊತ್ತಿದ್ದಿರಬಹುದು" ಎಂದಿತು.

ಇಡಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ನಂತರ, ನ್ಯಾಯಾಲಯವು, "ಅಪರಾಧಿಕ ಗಳಿಕೆಯ ಬಳಕೆ ಮತ್ತು ಮರೆಮಾಚುವಿಕೆಯ ಪಿತೂರಿಯಲ್ಲಿ ಮಾತ್ರವೇ ಅಲ್ಲದೆ ಆ ಕಾರ್ಯದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎನ್ನುವುದು ಇಡಿಯ ದಾಖಲೆಗಳಿಂದ ತಿಳಿದು ಬರುತ್ತದೆ. ಇಡಿ ಪ್ರಕರಣವು ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತ್ರವೇ ಅಲ್ಲದೆ ಎಎಪಿ ಸಂಚಾಲಕರಾಗಿಯೂ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು ಎನ್ನುವುದನ್ನು ಬಹಿರಂಗಪಡಿಸುತ್ತದೆ" ಎಂದಿದೆ.

ಇದಲ್ಲದೆ ಮುಖ್ಯಮಂತ್ರಿಯ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಶ್ನಿಸಬಹುದಿತ್ತು ಎಂಬ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಶರ್ಮಾ ಅವರು, "ತನಿಖೆಯನ್ನು ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದು ಆರೋಪಿ ಅಲ್ಲ, ಅದು ಆರೋಪಿಯ ಅನುಕೂಲಕ್ಕೆ ತಕ್ಕಂತೆ ಇರುವಂತಿಲ್ಲ. ಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಯಾವುದೇ ನಿರ್ದಿಷ್ಟ ಸವಲತ್ತು ಇರುವುದಿಲ್ಲ" ಎಂದು ಆದೇಶದಲ್ಲಿ ದಾಖಲಿಸಿದರು.

2021ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಅವರನ್ನು ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯವು ಅವರನ್ನು ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ನೀಡಿತ್ತು. ಈ ಅದೇಶದ ವಿರುದ್ಧ ಕೇಜ್ರಿವಾಲ್‌ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com