ಸಿಎಜಿ ವರದಿ ಮಂಡನೆ ವಿಳಂಬ: ಬಿಜೆಪಿ ಶಾಸಕರ ವಿಶೇಷ ಅಧಿವೇಶನದ ಕೋರಿಕೆ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಅರ್ಜಿಯಲ್ಲಿ ಆರೋಪಿಸಿರುವಂತೆ ದೆಹಲಿಯ ವಿಧಾನಸಭೆಯಲ್ಲಿ ಸಿಎಜಿ ವರದಿ ಮಂಡಿಸುವಲ್ಲಿ ಎಎಪಿ ಸರ್ಕಾರ ವಿಪರೀತ ವಿಳಂಬ ಮಾಡಿದೆ ಎಂಬುದನ್ನು ನ್ಯಾಯಾಲಯ ಒಪ್ಪಿತು.
Delhi High Court, BJP, AAP
Delhi High Court, BJP, AAP
Published on

ಮಹಾಲೇಖಪಾಲರ ವರದಿಗಳನ್ನು (ಸಿಎಜಿ ವರದಿ) ಮಂಡಿಸುವುದಕ್ಕಾಗಿ ದೆಹಲಿ ವಿಧಾನಸಭೆ ವಿಶೇಷ ಅಧಿವೇಶನ ನಡೆಸುವಂತೆ ಕೋರಿ ಬಿಜೆಪಿಯ ಏಳು ಶಾಸಕರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ವಿಧಾನಸಭೆ ಅಧಿವೇಶನ ಕರೆಯುವ ಅಧಿಕಾರ ಸ್ಪೀಕರ್‌ಗೆ ಮಾತ್ರ ಇರುತ್ತದೆ ಎಂದು ಸುಪ್ರೀಂ ಕೋರ್ಟ್‌ ನಿಸ್ಸಂದಿಗ್ಧವಾದ ತೀರ್ಪು ನೀಡಿದೆ. ನ್ಯಾಯಾಲಯಗಳು ಹಾಗೆ ನಿರ್ದೇಶನ ನೀಡಲು ಅನುಮತಿ ಇಲ್ಲ. ವರದಿ ಮಂಡನೆಗಾಗಿ ವಿಶೇಷ ಅಧಿವೇಶನ ಕರೆಯಬೇಕೆಂಬ ಅರ್ಜಿಯನ್ನು ಪುರಸ್ಕರಿಸುವ ಒಲವು ನ್ಯಾಯಾಲಯಕ್ಕೆ ಇಲ್ಲ ಎಂದು ನ್ಯಾಯಮೂರ್ತಿ ಸಚಿನ್‌ ದತ್ತಾ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.  

Also Read
'ವಿಧಾನಸಭೆಯಲ್ಲಿ ಮಂಡನೆಗೂ ಮುನ್ನ ಸಿಎಜಿ ವರದಿ ಬಹಿರಂಗಪಡಿಸಬಹುದೇ?' ಪರಿಶೀಲಿಸಲಿದೆ ದೆಹಲಿ ಹೈಕೋರ್ಟ್

ಅದೇನೇ ಇದ್ದರೂ, ಅರ್ಜಿಯಲ್ಲಿ ಆರೋಪಿಸಿದಂತೆ  ವಿಧಾನಸಭೆಯ ಮುಂದೆ ವರದಿ ಮಂಡಿಸುವಲ್ಲಿ ಎಎಪಿ ಸರ್ಕಾರ ವಿಪರೀತ ವಿಳಂಬ ಮಾಡಿದೆ ಎಂಬುದನ್ನು ನ್ಯಾಯಾಲಯ ಒಪ್ಪಿತು.

ದೆಹಲಿ ಸರ್ಕಾರ ಸಿಎಜಿ ವರದಿ ಮಂಡಿಸಲು ಸುಮಾರು 490 ದಿನಗಳ ಕಾಲ ವಿಳಂಬ ಮಾಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

"ಸಿಎಜಿ ವರದಿ ಮಂಡಿಸುವುದು ಸಾಂವಿಧಾನಿಕ ಕಡ್ಡಾಯ ನಿಯಮವಾಗಿದ್ದು ಸಿಎಜಿ ವರದಿಗಳನ್ನು ಸ್ಪೀಕರ್‌ಗೆ ರವಾನಿಸಲು ದೆಹಲಿ ಸರ್ಕಾರದಿಂದ ವಿಪರೀತ ವಿಳಂಬವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ, ವಿಧಾನಸಭೆ ರಚನೆಯಾದ ಬಳಿಕ ಮುಂಬರುವ ಚುನಾವಣೆಗಳಿಗೆ ಅನುಗುಣವಾಗಿ ಅಧಿವೇಶನ ಕರೆದರೆ, ಸಿಎಜಿ ವರದಿಗಳನ್ನು ಸಾಧ್ಯವಾದಷ್ಟು ತ್ವರಿತವಾಗಿ ವಿಧಾನಸಭೆಯ ಮುಂದೆ ಮಂಡಿಸಲು ದೆಹಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅದು ನಿರ್ದೇಶಿಸಿದೆ.

Also Read
ರಾಜಕಾಲುವೆ-ರಸ್ತೆಗುಂಡಿ ಪ್ರಕರಣ: ಸಿಎಜಿ ಶಿಫಾರಸ್ಸು ಜಾರಿಗೆ ಸಮಿತಿ ರಚಿಸಲು ಸೂಚಿಸಿದ ಹೈಕೋರ್ಟ್‌

ಬಿಜೆಪಿಯ ಏಳು ಶಾಸಕರಾದ ವಿಜೇಂದರ್ ಗುಪ್ತಾ, ಮೋಹನ್ ಸಿಂಗ್ ಬಿಶ್ತ್, ಓಂ ಪ್ರಕಾಶ್ ಶರ್ಮಾ, ಅಜಯ್ ಕುಮಾರ್ ಮಹಾವಾರ್, ಅಭಯ್ ವರ್ಮಾ, ಅನಿಲ್ ಬಾಜಪೇಯ್ ಮತ್ತು ಜಿತೇಂದರ್ ಮಹಾಜನ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು

ಸಿಎಜಿ ವರದಿಗಳನ್ನು ವಿಧಾನಸಭೆ ಸ್ಪೀಕರ್‌ಗೆ ರವಾನಿಸಬೇಕು ಮತ್ತು ಈ ವರದಿಗಳ ಬಗ್ಗೆ ಚರ್ಚಿಸಲು ಮತ್ತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ನಡೆಸಬೇಕು ಎಂದು ಬಿಜೆಪಿ ಶಾಸಕರು ಕೋರಿದ್ದರು.

Kannada Bar & Bench
kannada.barandbench.com