2ಜಿ ತೀರ್ಪು: ಸಿಬಿಐ ಮೇಲ್ಮನವಿ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಅರ್ಜಿಯು ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 378(2)ರ ವ್ಯಾಪ್ತಿ ಮೀರಿರುವುದರಿಂದ ಅಸಮರ್ಥನೀಯ ಎಂದು ಮಾಸಾಂತ್ಯದಲ್ಲಿ ನಿವೃತ್ತಿ ಹೊಂದಲಿರುವ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ಹೇಳಿದ್ದಾರೆ.
Delhi HC, 2G
Delhi HC, 2G
Published on

ಕೇಂದ್ರ ಸರ್ಕಾರದಿಂದ ಅಗತ್ಯ ಅನುಮತಿ ಪಡೆಯದೇ 2ಜಿ ಹಗರಣಕ್ಕೆ ಸಂಬಂಧಿಸಿಂತೆ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಮೇಲ್ಮನವಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸೋಮವಾರ ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ (ಸಿಬಿಐ ವರ್ಸಸ್‌ ಎ ರಾಜಾ).

ಅರ್ಜಿಯು ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 378(2)ರ ವ್ಯಾಪ್ತಿ ಮೀರಿರುವುದರಿಂದ ಅಸಮರ್ಥನೀಯ ಎಂದು ನ್ಯಾಯಮೂರ್ತಿ ಬ್ರಿಜೇಶ್‌ ಸೇಥಿ ಹೇಳಿದ್ದಾರೆ.

Brijesh sethi
Brijesh sethi

ತನಿಖಾ ಸಂಸ್ಥೆಯಿಂದ ಮೇಲ್ಮನವಿ ಸಲ್ಲಿಕೆಯಾದ ಪೂರ್ವದ ಹಂತಗಳಿಗೆ ಈ ನಿಬಂಧನೆಯು ಸಂಬಂಧಪಡುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠವು ಸಿಬಿಐ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರು ಮೇಲ್ಮನವಿ ಸಲ್ಲಿಸಿರುವುದು ಸಾಕು ಎಂದು ಹೇಳಿದೆ. ಮೇಲ್ಮನವಿ ಸಲ್ಲಿಸುವಾಗ ಸರ್ಕಾರದ ಒಪ್ಪಿಗೆ ಪತ್ರವನ್ನು ಸಲ್ಲಿಸುವ ಬಾಧ್ಯತೆ ಸಿಬಿಐಗೆ ಇಲ್ಲ ಎಂದೂ ನ್ಯಾಯಾಲಯ ಹೇಳಿದೆ. ಭ್ರಷ್ಟಾಚಾರ ನಿಯಂತ್ರಣೆ ಕಾಯಿದೆಗೆ 2018ರಲ್ಲಿ ತರಲಾದ ತಿದ್ದುಪಡಿ ಅನ್ವಯ ಸೆಕ್ಷನ್‌ 13(1)(d) ಸದರಿ ಪ್ರಕರಣದಲ್ಲಿ ಆರೋಪಿಯ ನೆರವಿಗೆ ಬರುವುದಿಲ್ಲ ಎಂದು ಪೀಠ ಹೇಳಿದೆ.

“ಈಗಾಗಲೇ ನಡೆದುಹೋಗಿರುವ ಅಪರಾಧಗಳಿಗೆ ತಿದ್ದುಪಡಿಯಾದ ಕಾಯಿದೆ ಅನ್ವಯಿಸುವುದಿಲ್ಲ. ಹಿಂದಿನ ಕಾನೂನನ್ನು ಕೈಬಿಡುವ ಉದ್ದೇಶವಿರಲಿಲ್ಲ.”
ದೆಹಲಿ ಹೈಕೋರ್ಟ್‌

ಮಾಸಾಂತ್ಯದಲ್ಲಿ ನಿವೃತ್ತಿ ಹೊಂದಲಿರುವ ನ್ಯಾಯಮೂರ್ತಿ ಬ್ರಿಜೇಶ್‌ ಸೇಥಿ ಅವರು ತಮ್ಮ ವಿಚಾರಣೆಯಿಂದ ಮೇಲ್ಮನವಿಗಳನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಪ್ರಸಕ್ತ ಮೇಲ್ಮನವಿಯು ಮತ್ತೊಬ್ಬ ನ್ಯಾಯಮೂರ್ತಿಯಗಳ ಮುಂದೆ ವಿಚಾರಣೆಗೆ ಒಳಪಡಲಿದೆ.

ಸಿಆರ್‌ಪಿಸಿ ಸೆಕ್ಷನ್‌ 378(2)ರ ಅಡಿ ನಿಯಮಗಳನ್ನು ಅನುಸರಿಸದೇ 2ಜಿ ತೀರ್ಪು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿದೆ ಎಂದು ಆರೋಪಿಸಿ ಪ್ರಕರಣದಲ್ಲಿನ ಆರೋಪಿಗಳಾದ ಸಿದ್ಧಾರ್ಥ್‌ ಬೆಹುರಾ, ರಾಜೀವ್‌ ಅಗರ್ವಾಲ್‌ ಮತ್ತು ಶರದ್‌ ಕುಮಾರ್‌ ಮನವಿ ಸಲ್ಲಿಸಿದ್ದರು. ನಿರಪರಾಧಿಗಳು ಎಂದು ಘೋಷಿತರಾಗಿರುವ ಆರ್‌ ಕೆ ಚಂದೋಲಿಯಾ ಮತ್ತು ಕರೀಮ್‌ ಮೊರಾನಿ ಅವರು ಭ್ರಷ್ಟಾಚಾರ ನಿಯಂತ್ರಣೆ ಕಾಯಿದೆಯ 1988ರ ಸೆಕ್ಷನ್‌ 13ಕ್ಕೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಮೇಲ್ಮನವಿಗಳು ಫಲಪ್ರದವಾಗುವುದಿಲ್ಲ ಎಂದಿದ್ದಾರೆ.

ಕಾನೂನು ನಿಬಂಧನೆಗಳನ್ನು ಅನುಸರಿಸುವ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಸಿಬಿಐ ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಸಂಜಯ್‌ ಜೈನ್‌ ವಾದಿಸಿದರು.

2017ರ ಡಿಸೆಂಬರ್‌ನಲ್ಲಿ ಸಿಬಿಐ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ದೋಷಮುಕ್ತರನ್ನಾಗಿಸಿದ್ದನ್ನು ಪ್ರಶ್ನಿಸಿ 2018ರ ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು (ಇಡಿ) ಮೇಲ್ಮನವಿ ಸಲ್ಲಿಸಿವೆ. ನ್ಯಾ. ಸೇಥಿ ಅವರು ನವೆಂಬರ್‌ನಲ್ಲಿ ನಿವೃತ್ತರಾಗಲಿರುವುದರಿಂದ ಮೇಲ್ಮನವಿ ಕುರಿತಾದ ನಿರ್ಧಾರ ಕೈಗೊಳ್ಳಲು ತುರ್ತಾಗಿ ವರ್ಚುವಲ್‌ ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಸಿಬಿಐ ಮತ್ತು ಇಡಿ ಕೋರಿದ್ದವು.

Kannada Bar & Bench
kannada.barandbench.com