ತೆರಿಗೆ ಮರುಮೌಲ್ಯಮಾಪನ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ನಾಲ್ಕು ಹೊಸ ಅರ್ಜಿಗಳನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್

2014-15, 2015-16 ಮತ್ತು 2016-17ರ ಮರುಮೌಲ್ಯಮಾಪನ ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಮಾರ್ಚ್ 22ರಂದು ವಜಾಗೊಳಿಸಿತ್ತು.
ಕಾಂಗ್ರೆಸ್ ಮತ್ತು ದೆಹಲಿ ಹೈಕೋರ್ಟ್
ಕಾಂಗ್ರೆಸ್ ಮತ್ತು ದೆಹಲಿ ಹೈಕೋರ್ಟ್

ಆದಾಯ ತೆರಿಗೆ (ಐಟಿ) ಇಲಾಖೆ ತನ್ನ ವಿರುದ್ಧ ಪ್ರಾರಂಭಿಸಿದ್ದ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಸಲ್ಲಿಸಿದ್ದ ನಾಲ್ಕು ಹೊಸ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಇಂಥದ್ದೇ ಪ್ರಕರಣಕ್ಕೆ ಸಂಭಂಧಿಸಿದಂತೆ ಈಚೆಗೆ ತಾನು ನೀಡಿದ್ದ ತೀರ್ಪಿನ ವ್ಯಾಪ್ತಿಗೇ ಈ ಅರ್ಜಿಗಳೂ ಒಳಪಡುತ್ತವೆ ಎಂದು ಕಾಂಗ್ರೆಸ್ ಮತ್ತು ಐಟಿ ಇಲಾಖೆ ಎರಡೂ ಒಪ್ಪಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್ ಅವರಿದ್ದ ವಿಭಾಗೀಯ ಪೀಠ ಅರ್ಜಿಗಳನ್ನು ತಿರಸ್ಕರಿಸಿತು.

2014-15, 2015-16 ಮತ್ತು 2016-17ರ ಮರುಮೌಲ್ಯಮಾಪನ ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಮಾರ್ಚ್ 22ರಂದು ವಜಾಗೊಳಿಸಿತ್ತು. ಅವುಗಳಂತೆಯೇ ನಾಲ್ಕು ಹೊಸ ಅರ್ಜಿಗಳನ್ನು ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್
ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್

ಕೆಲ ವಾರಗಳಿಂದೀಚೆಗೆ ಅನೇಕ ತೆರಿಗೆ ಸಂಬಂಧಿ ಪ್ರಕ್ರಿಯೆಗಳಿಗೆ ಒಳಗಾಗಿರುವ ಕಾಂಗ್ರೆಸ್‌ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರ್ಕಾರ ತನ್ನನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿತ್ತು.

ಐಟಿ ಇಲಾಖೆ ಪ್ರಾರಂಭಿಸಿದ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅನೇಕ ಅರ್ಜಿಗಳನ್ನು ನ್ಯಾಯಾಲಯಗಳು ವಜಾಗೊಳಿಸಿವೆ.

ಆದಾಯ ತೆರಿಗೆ ಕಾಯಿದೆಯಡಿ 2014-15 ರಿಂದ 2020-21ರವರೆಗೆ ಕಾಂಗ್ರೆಸ್‌ನ ಆದಾಯವನ್ನು ಮತ್ತಷ್ಟು ಪರಿಶೀಲನೆ ನಡೆಸುವುದಕ್ಕೆ ಆದಾಯ ತೆರಿಗೆ ಇಲಾಖೆಯ ಬಳಿ ಯಥೇಚ್ಛ ಹಾಗೂ ದೃಢವಾದ ಪುರಾವೆಗಳಿವೆ ಎಂದು ಮಾರ್ಚ್ 22ರಂದು ನ್ಯಾಯಾಲಯ ಹೇಳಿತ್ತು.

ಅಂತೆಯೇ, ಆದಾಯ ತೆರಿಗೆ (ಐಟಿ) ಇಲಾಖೆ ₹105 ಕೋಟಿಗಿಂತಲೂ ಹೆಚ್ಚಿನ ತೆರಿಗೆ ಪಾವತಿಸುವಂತೆ ತನಗೆ ನೀಡಿದ್ದ ನೋಟಿಸ್‌ಗೆ ತಡೆ ನೀಡಲು ನಿರಾಕರಿಸಿದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಆದೇಶ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನು ಅದು ಮಾರ್ಚ್ 13ರಂದು ತಿರಸ್ಕರಿಸಿತ್ತು.

ಇದೇ ನ್ಯಾಯಮೂರ್ತಿಗಳಿದ್ದ ಪೀಠ ಐಟಿಎಟಿ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಅಂದು ಹೇಳಿತ್ತು.

ಆದರೂ, ಪಕ್ಷದಿಂದ ರೂ 65.94 ಕೋಟಿ ವಸೂಲಿ ಮಾಡುವುದು ಸೇರಿದಂತೆ ಈ ಮಧ್ಯೆ ಸಂಭವಿಸಿದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಐಟಿಎಟಿ ಮುಂದೆ ತಡೆಯಾಜ್ಞೆಗಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ನ್ಯಾಯಾಲಯ ಕಾಂಗ್ರೆಸ್‌ಗೆ ಅವಕಾಶ ನೀಡಿತ್ತು.

Kannada Bar & Bench
kannada.barandbench.com