ವ್ಯಭಿಚಾರ: ಪತ್ನಿ, ಮಗುವಿನ ರಕ್ತದ ಮಾದರಿ ಸಂಗ್ರಹಿಸಬೇಕೆಂಬ ಪತಿಯ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ದಂಪತಿ ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದಾಗ ಮಗು ಜನಿಸಿದ್ದರಿಂದ ಮಗು ಅವರದೇ ಸಂತತಿ ಎಂಬುದರ ಪರವಾಗಿ ತನ್ನ ಊಹೆ ಇದೆ ಎಂದು ಹೇಳಿದ ನ್ಯಾಯಾಲಯ.
ವ್ಯಭಿಚಾರ: ಪತ್ನಿ, ಮಗುವಿನ ರಕ್ತದ ಮಾದರಿ ಸಂಗ್ರಹಿಸಬೇಕೆಂಬ ಪತಿಯ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಮಗುವಿನ ತಂದೆ ಯಾರು ಎಂಬುದನ್ನು ಪರೀಕ್ಷಿಸಲು ಹೆಂಡತಿಯ ವಿರುದ್ಧದ ತಾನು ಮಾಡಿರುವ ವ್ಯಭಿಚಾರದ ಆರೋಪಗಳಿಗೆ ಪೂರಕವಾಗಿ ತನ್ನ ಪತ್ನಿ ಮತ್ತು ಅಪ್ರಾಪ್ತ ಮಗುವಿನ ರಕ್ತದ ಮಾದರಿ ಕೋರಿ ಅಜೂಸ್ಪರ್ಮಿಯಾಕ್ಕೆ (ಪುರುಷ ಬಂಜೆತನದ ಒಂದು ರೂಪ) ತುತ್ತಾದ ವ್ಯಕ್ತಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ದಂಪತಿ ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದಾಗ ಮಗು ಜನಿಸಿದೆ ಎಂಬುದನ್ನು ತಿಳಿದ ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧೇರ್ ಮತ್ತು ಅಮಿತ್ ಬನ್ಸಾಲ್ ಅವರಿದ್ದ ವಿಭಾಗೀಯ ಪೀಠ ಭಾರತೀಯ ಸಾಕ್ಷ್ಯ ಕಾಯಿದೆ- 1872ರ ಸೆಕ್ಷನ್ 112 ರ ಪ್ರಕಾರ ಮಗು ಅವರದೇ ಸಂತತಿ ಎಂಬುದರ ಪರವಾಗಿ ತನ್ನ ಊಹೆ ಇದೆ ಎಂದು ಹೇಳಿದೆ.

ನ್ಯಾಯಮೂರ್ತಿ ರಾಜೀವ್ ಶಕ್ಧೇರ್ ಮತ್ತು ನ್ಯಾಯಮೂರ್ತಿ ಅಮಿತ್ ಬನ್ಸಾಲ್
ನ್ಯಾಯಮೂರ್ತಿ ರಾಜೀವ್ ಶಕ್ಧೇರ್ ಮತ್ತು ನ್ಯಾಯಮೂರ್ತಿ ಅಮಿತ್ ಬನ್ಸಾಲ್

ಪತಿ ಆರೋಪಿಸಿರುವಂತೆ ಪತ್ನಿ ವ್ಯಭಿಚಾರ ಸಂಬಂಧದಲ್ಲಿ ಭಾಗಿಯಾಗಿದ್ದಾಳೆಯೇ ಎಂಬುದು ವಿಚಾರಣೆಯ ನಂತರ ನಿರ್ಧರಿಸಬೇಕಾದ ಅಂಶವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತನ್ನ ಹೆಂಡತಿಯ ವಿರುದ್ಧ ಈ ಆರೋಪವನ್ನು ಮಾಡುವಾಗ, ಪತಿ ತಾನು ಅಜೂಸ್ಪರ್ಮಿಯಾದಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು, ಇದು ವ್ಯಕ್ತಿಯ ಸ್ಖಲನದಲ್ಲಿ (ವೀರ್ಯ) ವೀರ್ಯಾಣುಗಳಿಲ್ಲದ ಸ್ಥಿತಿಯನ್ನು ಸೂಚಿಸಲು ಬಳಸುವ ವೈದ್ಯಕೀಯ ಪದ. ಅಜೂಸ್ಪರ್ಮಿಯಾಗೆ ಅನೇಕ ಕಾರಣಗಳಿದ್ದು, ಕೆಲವಕ್ಕೆ ಚಿಕಿತ್ಸೆ ನೀಡಬಹುದಾಗಿದೆ. ಉಳಿದ ಪ್ರಕರಣಗಳಲ್ಲಿ ಜೀವಂತ ವೀರ್ಯವನ್ನು ಸಂಬಂಧಪಟ್ಟ ವ್ಯಕ್ತಿಯಿಂದ ತೆಗೆದು ಐವಿಎಫ್‌ ರೀತಿಯ ಸಂತಾನೋತ್ಪತ್ತಿ ತಂತ್ರಜ್ಞಾನ ಅನುಸರಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ತಿಳಿಸಿದೆ.

ಆದ್ದರಿಂದ, ಪತಿಯ ವಾದದ ಹೊರತಾಗಿಯೂ, ಮಗುವಿನ ತಂದೆ ಆತನೇ ಆಗಿರುವ ಸಾಧ್ಯತೆ ಇದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಹೀಗಾಗಿ ವಿಚಾರಣೆಯ ಭಾಗವಾಗದ ಮಗುವಿನ ಹಿತಾಸಕ್ತಿ ಮೇಲೆ ಪತಿ ಪರಿಣಾಮ ಬೀರುವಂತಿಲ್ಲ. ಪತ್ನಿ ತನ್ನ ಪತಿಯನ್ನು ಹೊರತುಪಡಿಸಿ ಬೇರೆ ವ್ಯಕ್ತಿಯೊಂದಿಗೆ ಸ್ವಯಂಪ್ರೇರಿತವಾಗಿ ಸಂಭೋಗ ನಡೆಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಕೌಟುಂಬಿಕ ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ. ಮಗುವನ್ನು ಪಿತೃತ್ವ ಪರೀಕ್ಷೆಗೆ ಒಳಪಡಿಸದೆಯೂ ಪತ್ನಿ ವ್ಯಭಿಚಾರ ನಡೆಸಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು ಎಂಬುದಾಗಿ ನ್ಯಾಯಾಲಯ ನುಡಿದಿದೆ.

ಪತ್ನಿ ಮತ್ತು ಅಪ್ರಾಪ್ತ ಮಗುವಿಗೆ ರಕ್ತದ ಮಾದರಿಗಳನ್ನು ನೀಡುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದ ನಂತರ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.

ವಾದ ಆಲಿಸಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣ ಇಲ್ಲ ಎಂದು ತಿಳಿಸಿ ಪತಿಯ ಮನವಿಯನ್ನು ವಜಾಗೊಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Paternity test order.pdf
Preview
Kannada Bar & Bench
kannada.barandbench.com