'ರಾ' ಕುರಿತಾದ 'ದ ಪ್ರಿಂಟ್ʼ ಲೇಖನ ತೆಗೆದುಹಾಕಲು ಮನವಿ: ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

ಇದು ನಿರುಪದ್ರವಿ ವರದಿ. ಅದನ್ನು ಹಾಗೆಯೇ ಬಿಡಿ. ಇದು ಯಾರ ಗುರುತನ್ನೂ ಬಿಟ್ಟುಕೊಡುವುದಿಲ್ಲ. ನೀವು [ವಕೀಲ] ಆ ವರದಿಗಿಂತಲೂ ಹೆಚ್ಚಿನ ಜನರ ಗುರುತನ್ನು ಬಯಲುಗೊಳಿಸುತ್ತಿದ್ದೀರಿ ಎಂದು ಅನ್ನಿಸುತ್ತಿದೆ.
ಮುದ್ರಣ
ಮುದ್ರಣ
Published on

ಭಾರತದ ವಿದೇಶಿ ಬೇಹುಗಾರಿಕಾ ಸಂಸ್ಥೆಯಾದ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ (ರಿಸರ್ಚ್‌ ಅಂಡ್‌ ಅನಾಲಿಸಿಸ್‌ ವಿಂಗ್‌ - ರಾ) ತನ್ನ ಉತ್ತರ ಅಮೆರಿಕಾದ ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿರುವ ಬಗ್ಗೆ ದಿ ಪ್ರಿಂಟ್ ಪ್ರಕಟಿಸಿದ ಲೇಖನವನ್ನು ತೆಗೆದುಹಾಕಲು ನಿರ್ದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಮೇಲ್ನೋಟಕ್ಕೆ ಈ ಲೇಖನ ಅಧಿಕಾರಿಗಳ ವೃತ್ತಿಜೀವನಕ್ಕೆ ತೊಂದರೆ ಉಂಟುಮಾಡುವುದಿಲ್ಲ ಅಥವಾ ಅವರ ಕುಟುಂಬ ಸದಸ್ಯರ ಜೀವಕ್ಕೆ ಯಾವುದೇ ಅಪಾಯ ತರುವುದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

"ಪತ್ರಿಕಾ ಸ್ವಾತಂತ್ರ್ಯವನ್ನು ಅತ್ಯುನ್ನತ ಸ್ಥಾನದಲ್ಲಿ ಇರಿಸಲಾಗಿದೆ. ಲೇಖನವನ್ನು ಈ ರೀತಿ ತೆಗೆದುಹಾಕಲು ನಾವು ಆದೇಶಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಒತ್ತಿಹೇಳಿದೆ.

ಅಗತ್ಯವೆಂದು ಪರಿಗಣಿಸಿದರೆ ಪ್ರಕರಣವನ್ನು ನಿಭಾಯಿಸಲು ಸರ್ಕಾರಕ್ಕೆ ಸಾಕಷ್ಟು ಅಧಿಕಾರವಿದೆ ಎಂದು ಕೂಡ ನ್ಯಾಯಾಲಯ ಮನವಿ ತಿರಸ್ಕರಿಸುವಾಗ ಹೇಳಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ

'ನಿಜ್ಜರ್-ಪನ್ನುನ್ ಎಫೆಕ್ಟ್: ರಾ ಡೌನ್ಸ್‌ ಶಟರ್ಸ್‌ ಇನ್‌ ನಾರ್ತ್‌ ಅಮೆರಿಕಾʼ (ನಿಜ್ಜರ್‌-ಪನ್ನುನ್‌ ಪರಿಣಾಮ: ಉತ್ತರ ಅಮೆರಿಕಾದಲ್ಲಿ ಬಾಗಿಲು ಮುಚ್ಚಿದ ರಾ) ಎಂಬ ಶೀರ್ಷಿಕೆಯ ವರದಿಯನ್ನು ದ ಪ್ರಿಂಟ್ ಜಾಲತಾಣವು 2023ರ ನವೆಂಬರ್ 30ರಂದು ಪ್ರಕಟಿಸಿತ್ತು. ಲೇಖನವನ್ನು ದ ಪ್ರಿಂಟ್ ನ ಕಾಂಟ್ರಿಬ್ಯೂಟಿಂಗ್‌ ಎಡಿಟರ್‌ ಪ್ರವೀಣ್ ಸ್ವಾಮಿ ಬರೆದಿದ್ದರು.

ಭಾರತೀಯ ಹೈಕಮಿಷನ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಮಗೆ ನೀಡಿದ ಮಾಹಿತಿ ಪ್ರಕಾರ ಲೇಖನ ಭಾರತೀಯ ರಾಜತಾಂತ್ರಿಕರು ಮತ್ತು ಗುಪ್ತಚರರ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ವಕೀಲ ರಾಘವ್ ಅವಸ್ಥಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು.

ವಿದೇಶದಲ್ಲಿ ಕೆಲಸ ಮಾಡುವ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ರಾಜತಾಂತ್ರಿಕರು ಗುಪ್ತಚರ ಸೇವೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಸುದ್ದಿ ಮೂಲ ಆಧರಿಸಿದ ಊಹಾಪೋಹದ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳನ್ನು ತಡೆಯಬೇಕೆಂದು ಕೂಡ ಅವಸ್ಥಿ ಕೋರಿದ್ದರು.

ತನ್ನನ್ನು ಸಂಪರ್ಕಿಸಿದ ರಾಜತಾಂತ್ರಿಕನ ಗುರುತನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸಿದ್ಧನಿದ್ದೇನೆ. ಅಧಿಕಾರಿಗಳ ಗುರುತು ಬಹಿರಂಗವಾಗದಿರಲು ರಹಸ್ಯವಾಗಿ ನ್ಯಾಯಾಲಯ ವಿಚಾರಣೆ ನಡೆಸಬಹುದು ಎಂದು ಅವರು ಹೇಳಿದ್ದರು.

ಆದರೆ ವಾದ ತಿರಸ್ಕರಿಸಿದ ನ್ಯಾಯಾಲಯ, ಈ ರೀತಿಯ ವರದಿಯನ್ನು ನಿರ್ಬಂಧಿಸುವಂತೆ ಆದೇಶಿಸಲಾಗದು ಎಂದಿತು.

ನ್ಯಾಯಾಲಯದಲ್ಲಿ ಪ್ರಕರಣವನ್ನು ಚರ್ಚಿಸುವ ಮೂಲಕ, ಅವಸ್ಥಿ ಅವರು ಗುಪ್ತಚರ ಅಧಿಕಾರಿಗಳ ಗುರುತನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಪೀಠ ಹೇಳಿದೆ.

"ಇದು ನಿರುಪದ್ರವಿ ವರದಿ. ಅದನ್ನು ಹಾಗೆಯೇ ಬಿಡಿ. ಇದು ಯಾರ ಗುರುತನ್ನೂ ಬಿಟ್ಟುಕೊಡುವುದಿಲ್ಲ. ನೀವು [ಅವಸ್ಥಿ] ಆ ವರದಿಗಿಂತಲೂ ಹೆಚ್ಚಿನ ಜನರ ಗುರುತನ್ನು ಬಯಲುಗೊಳಿಸುತ್ತಿದ್ದೀರಿ ಎಂದು ಅನ್ನಿಸುತ್ತಿದೆ. ನಿಮ್ಮ (ಮಾಹಿತಿ) ಮೂಲ ಸರಿಯಾಗಿದೆಯೋ ಇಲ್ಲವೋ, ತಿಳಿದಿಲ್ಲ" ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಈ ಸಮಸ್ಯೆಯನ್ನು ಎದುರಿಸಲು ಭಾರತ ಸರ್ಕಾರಕ್ಕೆ ಸಾಕಷ್ಟು ಅಧಿಕಾರಗಳಿದ್ದು ರಾಷ್ಟ್ರೀಯ ಭದ್ರತೆಗೆ ಏನಾದರೂ ಅಪಾಯವಿದೆ ಎಂದು ಸರ್ಕಾರ ಭಾವಿಸಿದರೆ, ಆ ಕುರಿತು ಅದು ಕ್ರಮ ಕೈಗೊಳ್ಳಲು ಮುಕ್ತವಾಗಿದೆ ಎಂದು ತಿಳಿಸಿದ ನ್ಯಾಯಾಲಯ ಪಿಐಎಲ್‌ ಕಪೋಲಕಲ್ಪಿತವಾಗಿದೆ ಎಂದು ಹೇಳಿ ಮನವಿ ವಜಾಗೊಳಿಸಿತು.

Kannada Bar & Bench
kannada.barandbench.com