ಹಯಾತ್ ರಿಜೆನ್ಸಿ ಮಾಲೀಕರಿಗೆ ಒಂದೇ ಬಾರಿ ಸಾಲ ಇತ್ಯರ್ಥ: ತನಿಖೆ ಕೋರಿದ್ದ ಪಿಐಎಲ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಪ್ರಕರಣದಲ್ಲಿ ನೋಟಿಸ್ ನೀಡಲು ನಿರಾಕರಿಸಿದ ನ್ಯಾಯಾಲಯ, ತೋರಿಕೆ, ಶಂಕೆ, ಊಹೆಯ ಆಧಾರದಲ್ಲಿ ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಇನ್ಫ್ರಾಸ್ಟ್ರಕ್ಚರ್ ವಾಚ್‌ಡಾಗ್‌ ಕತ್ತಲೆಯಲ್ಲಿ ಗುಂಡು ಹೊಡೆದಿದೆ ಎಂದು ಹೇಳಿದೆ.
Hyatt
HyattImage for representative purpose
Published on

ದೆಹಲಿಯಲ್ಲಿ ಹಯಾತ್ ರೀಜೆನ್ಸಿಯನ್ನು ಹೊಂದಿರುವ ಏಷ್ಯನ್ ಹೋಟೆಲ್ಸ್‌ ನಾರ್ತ್ ಪ್ರೈವೇಟ್ ಲಿಮಿಟೆಡ್‌ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರಗಳು ನೀಡಿದ ಸಾಲಗಳಿಗೆ ಸಂಬಂಧಿಸಿದಂತೆ ಒಮ್ಮೆಗೇ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸಿದ್ದ ಕ್ರಮದ ಕುರಿತು ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ [ಇನ್ಫ್ರಾಸ್ಟ್ರಕ್ಚರ್ ವಾಚ್‌ಡಾಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ] .

ಪ್ರಕರಣದಲ್ಲಿ ನೋಟಿಸ್ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಅಜಯ್ ದಿಕ್ಪಾಲ್‌ ಅವರಿದ್ದ ಪೀಠ,  ತೋರಿಕೆ, ಶಂಕೆ, ಊಹೆಯ ಆಧಾರದಲ್ಲಿ ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಇನ್ಫ್ರಾಸ್ಟ್ರಕ್ಚರ್ ವಾಚ್‌ಡಾಗ್‌ ಕತ್ತಲೆಯಲ್ಲಿ ಗುಂಡು ಹೊಡೆದಿದೆ ಎಂದಿದೆ.

Also Read
ಒಂದೇ ಬಾರಿಗೆ ಸಾಲ ಮರುಪಾವತಿ ಮಾಡುವ ಅವಕಾಶವನ್ನು ಸಾಲಗಾರರು ಹಕ್ಕಾಗಿ ಕೇಳುವಂತಿಲ್ಲ: ಬಾಂಬೆ ಹೈಕೋರ್ಟ್

ಸಾರ್ವಜನಿಕ ವಲಯದ ಬ್ಯಾಂಕುಗಳು ಒಂದೇ ಬಾರಿಗೆ ಸಾಲ ಪಾವತಿ ವ್ಯವಸ್ಥೆ ಅಂಗೀಕರಿಸುವ ಮುನ್ನ ಅಗತ್ಯವಾದ ಆರ್ಥಿಕ ವಿವೇಚನೆ ಬಳಸಿದ್ದು ಇಂತಹ ಪಿಐಎಲ್‌ಗಳನ್ನು ಪರಿಗಣಿಸಿದರೆ, ಅದು "ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಬಹುದು. ಜೊತೆಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪ್ರಾಮಾಣಿಕ ವಾಣಿಜ್ಯ ವಹಿವಾಟು ನಡೆಸುವುದನ್ನು ತಡೆಯಬಹುದು" ಎಂದು ಅದು ಒತ್ತಿಹೇಳಿದೆ.

ಏಷ್ಯನ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಒಂದೇ ಬಾರಿಗೆ ಸಾಲ ಪಾವತಿ ವ್ಯವಸ್ಥೆ ಕಲ್ಪಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ನಡೆಯಲ್ಲಿ ಯಾವುದೇ ದೌರ್ಬಲ್ಯ ಅಥವಾ ಅಪರಾಧಿಕ ಆರ್ಥಿಕ ಅನುಚಿತತೆ ಕಂಡುಬಂದಿಲ್ಲ ಎಂದು ಅದು ಹೇಳಿದೆ.

Also Read
ವಯನಾಡ್ ಸಂತ್ರಸ್ತರ ಸಾಲಮನ್ನಾಕ್ಕೆ ಮುಂದಾಗದ ಕೇಂದ್ರ: ಸಾಲ ವಸೂಲಾತಿಗೆ ಕಡಿವಾಣ ಹಾಕಿದ ಕೇರಳ ಹೈಕೋರ್ಟ್

ಏಷ್ಯನ್ ಹೋಟೆಲ್ಸ್ ನಾರ್ತ್ ಸಾರ್ವಜನಿಕ ವಲಯದ ಬ್ಯಾಂಕುಗಳೊಂದಿಗಿನ ಒಂದೇ ಬಾರಿಗೆ ಸಾಲ ಪಾವತಿ ವ್ಯವಸ್ಥೆ ಒಪ್ಪಂದದಲ್ಲಿ ಕಡಿಮೆ ಮೌಲ್ಯಮಾಪನ ಮತ್ತು ಆರ್ಥಿಕ ಅನುಚಿತತೆ ಕಂಡುಬಂದಿದೆ ಎಂದು ಆರೋಪಿಸಿ ಎನ್‌ಜಿಒ ನ್ಯಾಯಾಲಯದ ಮೆಟ್ಟಿಲೇರಿತ್ತು.  

ಪಿಐಎಲ್‌ ಸಲ್ಲಿಸಿರುವ ವ್ಯಕ್ತಿ ಪಿಐಎಲ್‌ ನಿಯಮಾವಳಿಯ ನಿಯಮ 9(i)(ಸಿ) ಪ್ರಕಾರ ತನ್ನ ಅರ್ಜಿಯಲ್ಲಿ ಮಾಡಿರುವ ಆರೋಪಗಳ ಮಾಹಿತಿ/ತಥ್ಯಗಳ ಮೂಲವನ್ನು ಸ್ಪಷ್ಟವಾಗಿ ಹೇಳುವುದು ಕಡ್ಡಾಯ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಪ್ರಕರಣದಲ್ಲಿ ಅರ್ಜಿದಾರ ತನ್ನ ಮಾಹಿತಿಯ ಮೂಲವನ್ನು ಕೇವಲ ನಂಬಬಹುದಾದಂತಹ ಗಮನ ಸೆಳೆಯುವ ವ್ಯಕ್ತಿ ಎಂದಷ್ಟೇ ಹೇಳಿದ್ದಾರೆ ಎಂಬುದಾಗಿ ನ್ಯಾಯಾಲಯ ತಿಳಿಸಿತು. ಅಂತೆಯೇ ಅರ್ಜಿದಾರ ತಮ್ಮ ದಾವೆಗೆ ಪೂರಕವಾದ ಮೂಲವನ್ನು ವಿವರಿಸಿಲ್ಲ ಎಂದ ಅದು ಪಿಐಎಲ್‌ ತಿರಸ್ಕರಿಸಿತು.

Kannada Bar & Bench
kannada.barandbench.com