ಅರವಿಂದ್‌ ಕೇಜ್ರಿವಾಲ್‌ ಪದಚ್ಯುತಿಗೆ ಮನವಿ: ಪಿಐಎಲ್‌ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಕೇಜ್ರಿವಾಲ್ ಸಿಎಂ ಆಗಿ ಮುಂದುವರಿಯಲು ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Published on

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

ಈ ವಿಚಾರವನ್ನು ಪರಿಶೀಲಿಸುವುದು ಕಾರ್ಯಾಂಗ ಮತ್ತು ರಾಷ್ಟ್ರಪತಿ ಅವರಿಗೆ ಬಿಟ್ಟದ್ದು. ಇದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

"ನ್ಯಾಯಾಂಗ ಹಸ್ತಕ್ಷೇಪಕ್ಕೆ ಅವಕಾಶವಿದೆಯೇ? ಲೆಫ್ಟಿನೆಂಟ್‌ ಗವರ್ನರ್‌ ಈ ವಿಷಯ ಪರಿಶೀಲಿಸುತ್ತಿದ್ದಾರೆ ಎಂದು ನಾವು ಇಂದಿನ ಪತ್ರಿಕೆಯಲ್ಲಿ ಓದಿದ್ದೇವೆ. ನಂತರ ಅದು ರಾಷ್ಟ್ರಪತಿಗಳೆದುರು ಹೋಗುತ್ತದೆ. ಅದು ಬೇರೆಯದೇ ಕ್ಷೇತ್ರ. ಕೆಲವು ಪ್ರಾಯೋಗಿಕ ತೊಂದರೆಗಳು ಇರಬಹುದು ಎಂದು ಅರ್ಥಮಾಡಿಕೊಂಡಿದ್ದೇವೆ. ಆದೇಶ ಏಕೆ ಹೊರಡಿಸಬೇಕು? ನಾವು ರಾಷ್ಟ್ರಪತಿ ಅಥವಾ ಲೆಫ್ಟಿನೆಂಟ್ ಗವರ್ನರ್ ಗೆ ಯಾವುದೇ ಮಾರ್ಗದರ್ಶನ ನೀಡಬೇಕಾಗಿಲ್ಲ. ಕಾರ್ಯಾಂಗ ರಾಷ್ಟ್ರಪತಿ ಆಡಳಿತ ಹೇರುತ್ತದೆ. ಅವರಿಗೆ ಮಾರ್ಗದರ್ಶನ ನೀಡುವುದು ನಮ್ಮ ಕೆಲಸವಲ್ಲ.ಇದರಲ್ಲಿ ನಾವು ಹೇಗೆ ಮಧ್ಯಪ್ರವೇಶಿಸಲು ಸಾಧ್ಯ? ಕಾರ್ಯಾಂಗ ಇದೆಲ್ಲವನ್ನೂ ಪರಿಶೀಲಿಸುತ್ತಿದೆ ಎಂದು ಖಾತ್ರಿಯಿದೆ" ಎಂಬುದಾಗಿ ನ್ಯಾಯಾಲಯ ಹೇಳಿದೆ.

ಕೇಜ್ರಿವಾಲ್ ಸಿಎಂ ಆಗಿ ಮುಂದುವರಿಯಲು ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ಅದು ಇದೇ ವೇಳೆ ಸ್ಪಷ್ಟಪಡಿಸಿದೆ.

"ಅವರು ಸಿಎಂ ಆಗುವುದನ್ನು ನಿಷೇಧಿಸುವಂತಹ ನಿಯಮಾವಳಿಗಳನ್ನು ತೋರಿಸಬೇಕಾಗುತ್ತದೆ. ಯಾವುದೇ ಸಾಂವಿಧಾನಿಕ ವೈಫಲ್ಯವಿದ್ದರೆ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಾರೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಅವರು ಇದನ್ನು ನಿರ್ಧರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಇಂದಿನ ಪರಿಸ್ಥಿತಿ ಊಹಿಸಲು ಅಸಾಧ್ಯವಾದುದಾಗಿದೆ. ಇಂದು ಯಾವುದೇ ಕಾನೂನು ನಿರ್ಬಂಧ ವಿಧಿಸುತ್ತಿಲ್ಲ" ಎಂದು ಪೀಠ ಹೇಳಿದೆ.

ನ್ಯಾಯಾಲಯ ರಾಜಕೀಯಕ್ಕೆ ಇಳಿಯುವುದಿಲ್ಲ. ಜನ ಅಂತಿಮವಾಗಿ ಇಂತಹ ವಿಷಯಗಳನ್ನು ನಿರ್ಧರಿಸುತ್ತಾರೆ ಎಂದು ಅದು ಸ್ಪಷ್ಟಪಡಿಸಿದೆ.

"ನಾವು ರಾಜಕೀಯಕ್ಕೆ ಇಳಿಯಬಾರದು. ರಾಜಕೀಯ ಪಕ್ಷಗಳು ಅದನ್ನು ಮಾಡುತ್ತವೆ. ಅವರು ಸಾರ್ವಜನಿಕರ ಮುಂದೆ ಹೋಗುತ್ತಾರೆ... ಅದು ನಮ್ಮ ಕೆಲಸವಲ್ಲ" ಎಂದ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತು.

"ಪಿಐಎಲ್‌ನಲ್ಲಿ ಕೋರಲಾದ ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಪಿಐಎಲ್ ವಜಾಗೊಳಿಸಲಾಗಿದೆ. ಪ್ರಕರಣದ ಅರ್ಹತೆಯ ಬಗ್ಗೆ ನಾವು ಪ್ರತಿಕ್ರಿಯಿಸಿಲ್ಲ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ
ಇಂದಿನ ಪರಿಸ್ಥಿತಿ ಊಹಿಸಲು ಅಸಾಧ್ಯವಾದುದಾಗಿದೆ. ಇಂದು ಯಾವುದೇ ಕಾನೂನು ನಿರ್ಬಂಧ ವಿಧಿಸುತ್ತಿಲ್ಲ
ದೆಹಲಿ ಹೈಕೋರ್ಟ್‌

ತಾನು ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಸುರ್ಜಿತ್ ಸಿಂಗ್ ಯಾದವ್ (ಅರ್ಜಿದಾರರು) ಎಂಬವರು ಪಿಐಎಲ್ ಸಲ್ಲಿಸಿದ್ದರು.

ಜೈಲಿನಲ್ಲಿದ್ದುಕೊಂಡೇ ಕೇಜ್ರಿವಾಲ್‌ ಅವರು ಅಧಿಕಾರ ಚಲಾಯಿಸುತ್ತಿದ್ದಾರೆ. ತಮ್ಮ ಬಂಧನ ಪ್ರಶ್ನಿಸಿ ಅವರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಏಪ್ರಿಲ್ 3ರಂದು ಆಲಿಸಲಿದೆ.

Kannada Bar & Bench
kannada.barandbench.com