ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಿಂದ ಪ್ರಾಣಿಗಳಿಗೆ ತೊಂದರೆ: ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ಉದ್ಯಮಿ ವಿರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹವನ್ನು ಗುಜರಾತ್‌ನ ಜಾಮನಗರದ ವನ್ಯಜೀವಿಗಳ ರಕ್ಷಣೆ ಮತ್ತು ಪುನರ್‌ವಸತಿ ಕೇಂದ್ರವಾದ ರಿಲಯನ್ಸ್ ಗ್ರೀನ್ಸ್‌ನಲ್ಲಿ ಆಯೋಜಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ರಾಧೆ ಕೃಷ್ಣ ದೇಗುಲ ಆನೆ ಕಲ್ಯಾಣ ಟ್ರಸ್ಟ್ ಮತ್ತು ಗ್ರೀನ್ಸ್ ವನ್ಯಜೀವಿಗಳ ರಕ್ಷಣೆ ಮತ್ತು ಪುನರ್‌ವಸತಿ ಕೇಂದ್ರದ ವಿರುದ್ಧ ದೂರು ದಾಖಲಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ನಿರ್ದೇಶನ ನೀಡುವಂತೆ ಕೋರಿ ರಾಹುಲ್ ನರುಲಾ ಎಂಬ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.
ಮಾರ್ಚ್‌ನಲ್ಲಿ ನಿಗದಿಯಾಗಿರುವ ವಿವಾಹ ಸಂಬಂಧಿತ ಕಾರ್ಯಕ್ರಮಗಳು ಈ ಪ್ರದೇಶದ ಪ್ರಾಣಿಗಳಿಗೆ ತೊಂದರೆ ಉಂಟುಮಾಡುತ್ತವೆ ಎಂದು ಅವರು ವಾದಿಸಿದ್ದರು.
ಅರ್ಜಿ ಕೇವಲ ಆತಂಕಗಳನ್ನು ಆಧರಿಸಿರುವುದರಿಂದ ಅದನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಗಿರೀಶ್ ಕತ್ಪಾಲಿಯಾ ಅವರಿದ್ದ ಪೀಠ ತಿಳಿಸಿತು.
ಆದರೆ, ಪ್ರಾಣಿ ಸಂಘಟನೆಗಳ ಬಗೆಗಿನ ದೂರುಗಳನ್ನು ಪರಿಶೀಲಿಸಲು ತ್ರಿಪುರ ಹೈಕೋರ್ಟ್ ಆದೇಶದ ಮೇರೆಗೆ 2022ರಲ್ಲಿ ರಚಿಸಲಾದ ಉನ್ನತಾಧಿಕಾರ ಸಮಿತಿ ಸಮಾರಂಭದ ಮೇಲ್ವಿಚಾರಣೆಗಾಗಿ ಸ್ಥಳದಲ್ಲಿ ಹಾಜರಿರಬಹುದು. ಪ್ರಾಣಿಗಳ ವಿರುದ್ಧ ಯಾವುದೇ ಅಮಾನುಷ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ- 1960ರ ಸೆಕ್ಷನ್ 23 ಅನ್ನು ಪ್ರಶ್ನಿಸಿದ್ದ ನರುಲಾ ಅವರು ಇದರಿಂದಾಗಿ ಪ್ರಕರಣದ ಬಗ್ಗೆ ಕ್ರಿಮಿನಲ್ ದೂರು ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಆದರೆ ಟ್ರಸ್ಟ್ ಮತ್ತು ಗ್ರೀನ್ಸ್ ಕೇಂದ್ರದ ಪರವಾಗಿ ಹಾಜರಾದ ವಕೀಲರು ಅರ್ಜಿಯನ್ನು ನಿರ್ವಹಿಸಲು ಸಾಧ್ಯವಿಲ್ಲ, ಇದು ಕ್ಷುಲ್ಲಕ ಮತ್ತು ದುರುದ್ದೇಶದಿಂದ ಕೂಡಿದೆ. ಖಾಸಗಿ ಕಾರ್ಯಕ್ರಮದಲ್ಲಿ ಪ್ರಾಣಿಗಳ ಬಳಕೆ ಮಾಡಲಾಗುತ್ತಿದೆ ಎಂಬ ಆಧಾರರಹಿತ ಆತಂಕವನ್ನು ಆಧರಿಸಿ ಅರ್ಜಿ ಸಲ್ಲಿಸಲಾಗಿದೆ ಎಂದರು.
ಈ ವಾದ ಪುರಸ್ಕರಿಸಿದ ನ್ಯಾಯಾಲಯ ನಿರ್ದೇಶನಗಳನ್ನು ನೀಡಲು ತನಗೆ ಯಾವುದೇ ಆಧಾರ ಇಲ್ಲ ಎಂದಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]