ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ವಿಚಾರಣಾ ನ್ಯಾಯಾಲಯ ಆರೋಪ ನಿಗದಿಪಡಿಸಿದ್ದನ್ನು ಪ್ರಶ್ನಿಸಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲೀವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಸ್ವಾತಿ ಮಾಲೀವಾಲ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಮಾಲೀವಾಲ್ ಹಾಗೂ ಇತರ ಮೂವರ ವಿರುದ್ಧ ಐಪಿಸಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಆರೋಪ ನಿಗದಿಗೆ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ರದ್ದುಗೊಳಿಸಲು ನ್ಯಾ. ಅಮಿತ್ ಮಹಾಜನ್ ನಿರಾಕರಿಸಿದರು.
ಬಿಜೆಪಿ ನಾಯಕಿ ಮತ್ತು ಡಿಸಿಡಬ್ಲ್ಯೂ ಮಾಜಿ ಅಧ್ಯಕ್ಷೆ ಬರ್ಖಾ ಶುಕ್ಲಾ ಸಿಂಗ್ ಅವರು ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನೀಡಿದ ದೂರಿನ ಆಧಾರದ ಮೇಲೆ 2016ರಲ್ಲಿ ಮಾಲೀವಾಲ್ ಹಾಗೂ ಇತರರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿತ್ತು.
ನೇಮಕಾತಿ ಜಾಹೀರಾತು ಪ್ರಕಟಿಸದೆ ನಿಯಮ ಉಲ್ಲಂಘಿಸಿ ಮಾಲೀವಾಲ್ ಹಾಗೂ ಸಹ ಆರೋಪಿಗಳು ಎಎಪಿ ಕಾರ್ಯಕರ್ತರು ಮತ್ತು ತಮ್ಮ ಪರಿಚಯದವರನ್ನು ಆಯೋಗಕ್ಕೆ ನೇಮಕ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ 26 ಹುದ್ದೆಗಳು ಮಂಜೂರಾಗಿದ್ದರೂ 87 ಮಂದಿಯನ್ನು ಆರೋಪಿಗಳು ನೇಮಕ ಮಾಡಿಕೊಂಡಿದ್ದರು. ಅವರಲ್ಲಿ 20 ವ್ಯಕ್ತಿಗಳು ನೇರವಾಗಿ ಎಎಪಿ ಜೊತೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿತ್ತು.
ಮಾಲೀವಾಲ್ ಹಾಗೂ ಇತರ ಮೂವರು ಆರೋಪಿಗಳ ವಿರುದ್ಧ ಬಲವಾದ ಅನುಮಾನ ಇದೆ ಎಂದು ರೌಸ್ ಅವೆನ್ಯೂ ನ್ಯಾಯಾಲಯ 2022ರಲ್ಲಿ ಆರೋಪ ನಿಗದಿಪಡಿಸುವ ಸಂದರ್ಭದಲ್ಲಿ ತಿಳಿಸಿತ್ತು.
ಹಿರಿಯ ವಕೀಲರಾದ ರೆಬೆಕಾ ಜಾನ್ ಮತ್ತವರ ತಂಡ ಮಾಲೀವಾಲ್ ಪರ ವಾದ ಮಂಡಿಸಿತ್ತು. ಸರ್ಕಾರವನ್ನು ವಕೀಲರಾದ ಅಶ್ವಿನ್ ಕಟಾರಿಯಾ ಸ್ಥಾಯಿ ವಕೀಲರಾದ ರೂಪಾಲಿ ಬಂಡೋಪಾಧ್ಯಾಯ ಮತ್ತಿತರರು ಪ್ರತಿನಿಧಿಸಿದ್ದರು.