ಎಲ್ಲಾ ಕಾನೂನು, ಕಾಯಿದೆ ಹಾಗೂ ಅಧಿಕೃತ ಸಂವಹನಗಳಲ್ಲಿ 'ಕೇಂದ್ರ ಸರ್ಕಾರ' ಪದದ ಬದಲಿಗೆ 'ಒಕ್ಕೂಟ ಸರ್ಕಾರ' ಎಂಬುದಾಗಿ ಬದಲಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ [ಆತ್ಮಾರಾಮ್ ಸರೋಗಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಕೇಂದ್ರ ಸರ್ಕಾರ ಮತ್ತು ಒಕ್ಕೂಟ ಸರ್ಕಾರ ಎನ್ನುವ ಸಂಬೋಧನೆಯನ್ನು ಪರಸ್ಪರ ಬದಲಿಸಿ ಉಪಯೋಗಿಸಬಹುದಾಗಿದ್ದು ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್, ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
"ನೀವು ಅದನ್ನು (ಸರ್ಕಾರ) ಹೇಗೆ ಸಂಬೋಧಿಸುತ್ತೀರಿ ಎಂಬುದು ಮುಖ್ಯವಲ್ಲ. ನಾವು ವಿಚಾರಣೆ ನಡೆಸಬೇಕಾದ ಪ್ರಮುಖ ಪ್ರಕರಣಗಳಿವೆ" ಎಂದು ನ್ಯಾಯಾಲಯ ತನ್ನ ಅಸಮಾಧಾನ ಹೊರಹಾಕಿತು.
ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಅಪೆಕ್ಸ್ ಕೋರ್ಟ್ ಎಂದೂ ಕರೆಯಲಾಗುತ್ತದೆ ಎಂದು ಅದು ನೆನಪಿಸಿತು.
"ದಯವಿಟ್ಟು ಅರ್ಥಮಾಡಿಕೊಳ್ಳಿ. ನಾವು ಭಾರತದ ಸರ್ವೋಚ್ಚ ನ್ಯಾಯಾಲಯವನ್ನು, ಸುಪ್ರೀಂ ಕೋರ್ಟ್ ಹಾಗೂ ಅಪೆಕ್ಸ್ ಕೋರ್ಟ್ ಎಂತಲೂ ಕರೆಯುತ್ತೇವೆ. ಇದು ಪಿಐಎಲ್ ಪ್ರಕರಣವಲ್ಲ... ಈ ಪದಗಳನ್ನು ಪರಸ್ಪರ ಬದಲಿಸಿ ಬಳಸಬಹುದಾಗಿದೆ" ಎಂದು ನ್ಯಾಯಾಲಯ ಹೇಳಿತು.
ನಂತರ ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ ವಿವರವಾದ ಆದೇಶ ಹೊರಡಿಸಲಾಗುವುದು ಎಂದು ಹೇಳಿದೆ.
ಸಂವಿಧಾನದ ಪ್ರಕಾರ ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಬ್ರಿಟಿಷ್ ಆಡಳಿತದಲ್ಲಿ ಇದ್ದ ರೀತಿಯಲ್ಲಿ ಕೇಂದ್ರ ಸರ್ಕಾರ ಎಂಬ ಪರಿಕಲ್ಪನೆ ಇರಲು ಸಾಧ್ಯವಿಲ್ಲ ಎಂದು 84 ವರ್ಷದ ಸಾಮಾಜಿಕ ಕಾರ್ಯಕರ್ತ ಆತ್ಮರಾಮ್ ಸರೋಗಿ ಪಿಐಎಲ್ ಸಲ್ಲಿಸಿದ್ದರು.
ಸಾಮಾನ್ಯ ಕಲಮುಗಳ ಕಾಯಿದೆಯಲ್ಲಿ ಉಲ್ಲೇಖಿಸಲಾಗಿರುವ ಕೇಂದ್ರ ಸರ್ಕಾರದ ವ್ಯಾಖ್ಯಾನವನ್ನು ಸಂವಿಧಾನಕ್ಕೆ ವಿರುದ್ಧ ಎಂದು ವಜಾ ಮಾಡಬೇಕು. ಇದು ಕೇಂದ್ರ ಸರ್ಕಾರವಲ್ಲ ಎಂದು ಕೋರಿದ್ದರು.
“ಸಂವಿಧಾನದ 1ನೇ ವಿಧಿಯಲ್ಲಿ ಒಕ್ಕೂಟ ಎಂದು ಬಳಕೆ ಮಾಡಲಾಗಿದೆಯೇ ವಿನಾ ಕೇಂದ್ರೀಯ ಎಂದಲ್ಲ. ದೇಶದಲ್ಲಿ ಒಕ್ಕೂಟ ಆಡಳಿತ ಪ್ರದೇಶಗಳು ಇವೆಯೇ ವಿನಾ ಕೇಂದ್ರೀಯ ಆಡಳಿತಗಳಲ್ಲ ಎಂದು ಅವರು ವಾದಿಸಿದ್ದರು.