ದೆಹಲಿಯಲ್ಲಿ ವಾಸಿಸುತ್ತಿರುವ ಎಲ್ಲಾ ಆಫ್ರಿಕನ್ನರು ಮತ್ತು ಬಾಂಗ್ಲಾದೇಶಿಯರನ್ನು ಡ್ರಗ್ ಪೆಡ್ಲರ್‌ಗಳು ಎಂದು ಆರೋಪಿಸಿ ಅವರ ಪಾಸ್‌ಪೋರ್ಟ್‌ಗಳ ಪೊಲೀಸ್ ಪರಿಶೀಲನೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ವಿಚಾರಣೆಗೆ ಪರಿಗಣಿಸಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ [ಸುಶೀಲ್ ಕೆಆರ್ ಜೈನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಬಾಂಗ್ಲಾದೇಶ ಅಥವಾ ಆಫ್ರಿಕಾ ಖಂಡದ ಜನರನ್ನು ಮಾದಕವಸ್ತು ಮಾರಾಟಗಾರರೆಂದು ಸಾರಾಸಗಟಾಗಿ ಹೇಳಿಬಿಡುವುದು ಜನಾಂಗೀಯ ನಿಂದನೆಯಾಗುತ್ತದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ಪೀಠ ಮನವಿ ತಿರಸ್ಕರಿಸಿತು.
"ನೀವು ಯಾವುದೇ ಸಂಶೋಧನೆ ಮಾಡಿಲ್ಲ ... ಇದಕ್ಕೆ ಆಧಾರ ಏನು ... ಈ ಹೇಳಿಕೆಗಳನ್ನು ಜನಾಂಗೀಯ ನಿಂದನೆ ಎಂದು ಕರೆಯಬಹುದು. ಅವರು ಕೂಡ ಮನುಷ್ಯರೇ. ಅವರು ಮಾನ್ಯತೆ ಪಡೆದಿರುವ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಕ್ಷಮಿಸಿ ಇದರಲ್ಲಿ (ಅರ್ಜಿಯಲ್ಲಿ) ಏನೂ (ಸತ್ವ) ಇಲ್ಲ" ಎಂದು ನ್ಯಾಯಾಲಯ ಹೇಳಿತು. ಹೀಗಾಗಿ ಅರ್ಜಿಯನ್ನು ಹಿಂಪಡೆಯಲಾಗಿದೆ.
ಬಹುತೇಕ ಆಫ್ರಿಕಾದ ಪ್ರಜೆಗಳು ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದು ಅದು ಯುವಕರ ಮೇಲೆ ಪರಿಣಾಮ ಬೀರಿ ಅವರ ಭವಿಷ್ಯಕ್ಕೆ ಧಕ್ಕೆ ತರುತ್ತದೆ ಎಂದು ಪಿಐಎಲ್ ಸಲ್ಲಿಸಿದ್ದ ವಕೀಲ ಸುಶೀಲ್ ಕುಮಾರ್ ಜೈನ್ ದೂರಿದ್ದರು.
ವಿದ್ಯಾರ್ಥಿ ವೀಸಾ ಮತ್ತು ವೈದ್ಯಕೀಯ ವೀಸಾ ಪಡೆದಿರುವ ಅನೇಕ ವಿದೇಶಿಗರು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ. ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ಸೈಬರ್ ವಂಚನೆಯಂತಹ ಅಪರಾಧಗಳಲ್ಲಿ ತೊಡಗಿದ್ದಾರೆ. ವೇಶ್ಯಾವಾಟಿಕೆಯಿಂದಾಗಿ ದೆಹಲಿಯಲ್ಲಿ ಏಡ್ಸ್ ಸಹಿತ ಲೈಂಗಿಕ ರೋಗಗಳು ಹರಡುತ್ತಿವೆ ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿತ್ತು.