ವಿಚಾರಗಳ ಮೇಲೆ ಏಕಸ್ವಾಮ್ಯವಿಲ್ಲ: ಶಂಶೇರಾ ಸ್ಟ್ರೀಮಿಂಗ್ ನಿಲ್ಲಿಸಲು ಕೋರಿದ್ದ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಶಂಶೇರಾ ತನ್ನ ಚಿತ್ರದ ಅನುಕರಣೆ ಎಂದು ಚಲನಚಿತ್ರ ನಿರ್ಮಾಪಕರೊಬ್ಬರು ಕೃತಿಸ್ವಾಮ್ಯ ಉಲ್ಲಂಘನೆ ಮೊಕದ್ದಮೆಯನ್ನು ದಾಖಲಿಸಿದ್ದರು. ಬಾಲಿವುಡ್‌ನಲ್ಲಿ ತಂದೆ-ಮಗನ ಕತೆಗಳು, ಐತಿಹಾಸಿಕ ಚಿತ್ರಗಳು ಇತ್ಯಾದಿ ಸಾಮಾನ್ಯವೆಂದ ನ್ಯಾಯಾಲಯ.
ಶಂಶೇರಾ
ಶಂಶೇರಾ

ರಣಬೀರ್ ಕಪೂರ್ ಅಭಿನಯದ ಶಂಶೇರಾ ಚಿತ್ರದ ಸ್ಟ್ರೀಮಿಂಗ್ ಅಥವಾ ಪ್ರಸಾರವನ್ನು ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಲ್ಲಿ (ಬಿಕ್ರಮ್‌ಜೀತ್‌ ಸಿಂಗ್‌ ಭುಲ್ಲರ್‌ ಮತ್ತು ಯಶ್ ರಾಜ್ ಫಿಲ್ಮ್ಸ್ & ಅದರ್ಸ್‌) ನಿಲ್ಲಿಸಲು ಮಧ್ಯಂತರ ಆದೇಶವನ್ನು ಕೋರಿ ಚಲನಚಿತ್ರ ನಿರ್ಮಾಪಕ ಬಿಕ್ರಮ್‌ಜೀತ್‌ ಸಿಂಗ್ ಭುಲ್ಲರ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ.

ಶಂಶೇರಾ ಚಿತ್ರದ ಕಥಾವಸ್ತು ಮತ್ತು ವಿಷಯವು ಅವರ ಕೃತಿ ' ಕಬು ನಾ ಛಡೇ ಖೇತ್' ಅನ್ನು ಆಧರಿಸಿದ್ದು, ಯಶ್ ರಾಜ್ ತಮ್ಮ ಕೃತಿಯ ಕೃತಿಸ್ವಾಮ್ಯ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಭುಲ್ಲರ್ ಅವರು ಯಶ್ ರಾಜ್ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆ ಮತ್ತು ಇತರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು.

ಪೀರಿಯಡ್ ಡ್ರಾಮಾ (ಐತಿಹಾಸಿಕ ಕಥಾವಸ್ತು), ತಂದೆ-ಮಗನ ಕಥೆ, ಮಕ್ಕಳು, ಪಕ್ಷಿಗಳು, ಕುದಿ ಎಣ್ಣೆ, ಕುದುರೆ, ಭೂಗತ ಸುರಂಗ ಮತ್ತು ವಿದೇಶಿ ಆಕ್ರಮಣದ ವಿರುದ್ಧ ಮಗನ ಸೇಡು ಮತ್ತು ದಂಗೆಯನ್ನು ಆಧರಿಸಿದ ಕಥಾವಸ್ತು ಮುಂತಾದ ವಿಷಯಗಳ ಮೇಲೆ ಏಕಸ್ವಾಮ್ಯವನ್ನು ಸಾಧಿಸಲು ಭುಲ್ಲರ್ ಪ್ರಯತ್ನಿಸಿದ್ದಾರೆ ಎಂದು ಗಮನಿಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಮನವಿಯನ್ನು ತಿರಸ್ಕರಿಸಿದರು.

ಈ ಅಂಶಗಳು ಹೆಚ್ಚಿನ ಬಾಲಿವುಡ್ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿವೆ. ಒಂದು ವೇಳೆ ನ್ಯಾಯಾಲಯವು ಭುಲ್ಲರ್ ಅವರ ಮನವಿ ಒಪ್ಪಿದರೆ, ಅದು ವಿಚಾರಗಳ ಮೇಲೆ ಏಕಸ್ವಾಮ್ಯ ಸಾಧಿಸುತ್ತದೆ, ಇದು ಸ್ಥಾಪಿತ ಕಾನೂನು ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಭುಲ್ಲರ್ ಅವರ ಚಿತ್ರಕಥೆ ಮತ್ತು ಶಂಶೇರಾ ಚಿತ್ರದ ಹೋಲಿಕೆಯು ಒಂದು ಇನ್ನೊಂದರ ಗಣನೀಯ ನಕಲು ಎಂಬ ಭಾವನೆಯನ್ನು ಮೂಡಿಸುವುದಿಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿತು.

"ಹಕ್ಕುಸ್ವಾಮ್ಯ ಉಲ್ಲಂಘನೆಯ ಮೇಲ್ನೋಟದ ಪ್ರಕರಣವನ್ನು ಕಂಡುಹಿಡಿಯಲು ವಾದಿ (ಭುಲ್ಲರ್) ವಿಫಲರಾಗಿದ್ದಾರೆ. ಹಾಗಾಗಿ, ಒಟಿಟಿ ವೇದಿಕೆಗಳಲ್ಲಿ ತಮ್ಮ ಚಲನಚಿತ್ರದ ಪ್ರಸಾರವನ್ನು ಮುಂದುವರಿಸದಂತೆ ಪ್ರತಿವಾದಿಗಳಿಗೆ ನಿರ್ಬಂಧ ಹೇರುವ ವಾದಿಯ ಪರವಾಗಿ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಭುಲ್ಲರ್ ಅವರು 2006 ರ ಸುಮಾರಿಗೆ, 18 ನೇ ಶತಮಾನದ ಸುತ್ತ ನಡೆಯುವ ಐತಿಹಾಸಿಕ ಕಥಾವಸ್ತುವಿನ ಚಿತ್ರಕತೆ ರೂಪಸಿದ್ದರು. 2009ರಲ್ಲಿ, ಕಬು ನಾ ಛಡೇ ಖೇತ್ ಅನ್ನು ೧೦ ನಿಮಿಷಗಳ ರನ್ ಟೈಮ್ ಹೊಂದಿರುವ ಕಿರು ಛಾಯಾಗ್ರಹಣ ಚಲನಚಿತ್ರವಾಗಿ ಸಂಕ್ಷಿಪ್ತಗೊಳಿಸಿ ಪ್ರದರ್ಶಿಸಿದ್ದರು. ಚಿತ್ರ ಟೊರೊಂಟೊದಲ್ಲಿ ನಡೆದ ಸ್ಪಿನ್ನಿಂಗ್ ವ್ಹೀಲ್ ಫಿಲ್ಮ್ ಫೆಸ್ಟಿವಲ್ ನಲ್ಲಿಯೂ ಪ್ರದರ್ಶಿತವಾಗಿತ್ತು. ದಿವಂಗತ ನಟ ಓಂ ಪುರಿ ಅವರು ಹಿನ್ನೆಲೆ ದನಿ ನೀಡಿದ್ದರು.

ತಮ್ಮ ಕೆಲಸದ ಬಗ್ಗೆ ಆಸಕ್ತಿ ಹೊಂದಿರುವ ಶಂಶೇರಾ ಚಿತ್ರದ ಬರಹಗಾರರು ಮತ್ತು ನಿರ್ದೇಶಕರೊಂದಿಗೆ ಸಂಪರ್ಕದಲ್ಲಿದ್ದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಜನವರಿ 2017 ರಲ್ಲಿ, ಯಶ್‌ ರಾಜ್‌ ಸಂಸ್ಥೆಯು ಅವರೊಂದಿಗೆ ಕೆಲಸ ಮಾಡುವ ಉದ್ದೇಶ ಹೊಂದಿಲ್ಲ ಎಂದು ತನಗೆ ತಿಳಿಸಿದ್ದಾಗೆ ಅವರು ಹೇಳಿದ್ದರು.

ಜೂನ್ 2022 ರಲ್ಲಿ ಶಂಶೇರಾ ಚಿತ್ರದ ಟ್ರೈಲರ್ ಯೂಟ್ಯೂಬ್ನಲ್ಲಿ ಬಿಡುಗಡೆಯಾದಾಗ, ಭುಲ್ಲರ್ ಅವರು ತಮ್ಮ ಕೆಲಸದ ಗಣನೀಯ ಅನುಕರಣೆ / ರೂಪಾಂತರವಿದೆ ಎಂದು ಆಪಾದಿಸಿ ಪರಿಹಾರಕ್ಕಾಗಿ ನ್ಯಾಯಾಲಯವನ್ನು ಎಡತಾಕಿದ್ದರು.

ಇದಕ್ಕೆ ಪ್ರತಿವಾದಿಗಳು (ಯಶ್ ರಾಜ್, ಚಲನಚಿತ್ರದ ನಿರ್ಮಾಪಕರು ಮತ್ತು ಬರಹಗಾರರು) ಒಂದು ಕಥೆಯು ಐತಿಹಾಸಿಕ ಕಥಾವಸ್ತು ಹೊಂದಿದ್ದ ಮಾತ್ರಕ್ಕೆ ಕೃತಿಸ್ವಾಮ್ಯ ಸಾಧಿಸಲಾಗದು. ವಿಷಯಗಳು ಅಥವಾ ಕಥಾವಸ್ತುಗಳು ಅಥವಾ ಆಲೋಚನೆಗಳಲ್ಲಿ ಕೃತಿಸ್ವಾಮ್ಯ ರಕ್ಷಣೆ ಇರಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ನ್ಯಾಯಾಲಯವು ಶಂಶೇರಾ ಚಲನಚಿತ್ರವನ್ನು ವೀಕ್ಷಿಸಿತು, ಭುಲ್ಲರ್ ಅವರ ಚಿತ್ರಕಥೆಯನ್ನು ವಿಶ್ಲೇಷಿಸಿತು. ಭುಲ್ಲರ್ ಅವರ ಚಿತ್ರಕಥೆ ಮತ್ತು ಚಿತ್ರದ ನಡುವಿನ ವ್ಯತ್ಯಾಸಗಳು ಆಪಾದಿಸಲಾದ ಹೋಲಿಕೆಗಳನ್ನು ಮೀರುತ್ತವೆ ಎನ್ನುವುದನ್ನು ಗಮನಿಸಿತು. ಪ್ರಸ್ತುತ ಹಂತದಲ್ಲಿ ಕೃತಿಸ್ವಾಮ್ಯ ಉಲ್ಲಂಘನೆಯ ಊಹೆಯನ್ನು ಎತ್ತಲು ಹೋಲಿಕೆಗಳು ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

"ಪ್ರತಿವಾದಿಗಳು ವಾದಿಸಿದಂತೆ, ಉತ್ತರ ಭಾರತದಲ್ಲಿ ನಿರ್ದಿಷ್ಟ ಸ್ಥಳಗಳ ಹೋಲಿಕೆಯು ಕೃತಿಸ್ವಾಮ್ಯದ ಉಲ್ಲಂಘನೆಗೆ ಕಾರಣವಾಗುವುದಿಲ್ಲ ಮತ್ತು ಅದೇ ರೀತಿ ಕುದಿ ತೈಲ, ನೀರು, ಪಕ್ಷಿಗಳು, ನೌಕಾಯಾನದ ಉದ್ದೇಶಕ್ಕಾಗಿ ಉತ್ತರ ದಿಕ್ಕಿನ ನಕ್ಷತ್ರ ಅನುಸರಿಸುವುದು, ನೀರಿನೊಳಗಿನ ರಹಸ್ಯ ಸುರಂಗಗಳು, ಕುದುರೆಗಳು, ಗಾಗ್ರಾ ಹಾರುವುದು, ಬಿಸಿಬಿಸಿ ದೃಶ್ಯಗಳು ಮುಂತಾದ ಅಂಶಗಳು ಅನಾದಿ ಕಾಲದಿಂದಲೂ ಬಾಲಿವುಡ್‌ ಚಲನಚಿತ್ರಗಳಲ್ಲಿ ಬಳಸಲಾಗಿದೆ. ಹಾಗಾಗಿ ಈ ವಿಚಾರಗಳು ಅಥವಾ ಅಭಿವ್ಯಕ್ತಿಗಳಲ್ಲಿ ಯಾವುದೇ ಅನನ್ಯತೆ ಇಲ್ಲ" ಎಂದು ಅಭಿಪ್ರಾಯಪಟ್ಟಿತು.

ತಲೆಮಾರುಗಳಿಂದ ಹರಡಿರುವ ತಂದೆ-ಮಗನ ಸಂಬಂಧಗಳ ಕುರಿತಾದ ಚಲನಚಿತ್ರಗಳು ಬಾಲಿವುಡ್‌ನಲ್ಲಿ "ಅತ್ಯಂತ ಸಾಮಾನ್ಯ" ಎಂದು ಅದು ಹೇಳಿತು

ಹಿರಿಯ ವಕೀಲ ಚಂದರ್ ಎಂ ಲಾಲ್ , ವಕೀಲರಾದ ಜೋಸೆಫ್ ಕೋಶಿ, ಅನನ್ಯಾ ಚುಗ್, ಇಂದ್ರಾಣಿ ಮೋಹನ್ ಮತ್ತು ಅಂಕಿತ್ ಚೌಹಾಣ್ ಅವರು ಬಿಕ್ರಮ್‌ಜೀತ್‌ ಸಿಂಗ್ ಭುಲ್ಲರ್ ಪರವಾಗಿ ವಾದಿಸಿದರು.

ಹಿರಿಯ ವಕೀಲ ರಾಜಶೇಖರ್ ರಾವ್ , ವಕೀಲರಾದ ಅಭಿಷೇಕ್ ಮಲ್ಹೋತ್ರಾ, ಆತ್ಮಜಾ ತ್ರಿಪಾಠಿ, ಪಾರ್ಥಸಾರಥಿ, ಅಮನ್ ಗಾಂಧಿ ಮತ್ತು ದೀಪಕ್ ಬಿಸ್ವಾಸ್ ಅವರ ಮೂಲಕ ಪ್ರತಿವಾದಿಗಳನ್ನು ಪ್ರತಿನಿಧಿಸಲಾಯಿತು.

[ತೀರ್ಪು ಓದಿ]

Attachment
PDF
Bikramjeet Singh Bhullar v Yash Raj Films & Ors.pdf
Preview
Kannada Bar & Bench
kannada.barandbench.com