
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯದೆಯೇ ವಿದೇಶ ಪ್ರವಾಸ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ನ್ಯಾಯಮೂರ್ತಿ ರವೀಂದರ್ ದುಡೇಜಾ ಅವರು ಕಾರ್ತಿ ಚಿದಂಬರಂ ಮೇಲೆ ಈ ಹಿಂದೆ ವಿಧಿಸಲಾಗಿದ್ದ ಪ್ರಯಾಣ ಷರತ್ತುಗಳನ್ನು ಸಡಿಲಿಸಿದರು.
ಆದರೆ ಪ್ರಯಾಣದ ವಿವರಗಳನ್ನು ಎರಡು ವಾರಗಳ ಮುನ್ನವೇ ಅಧಿಕಾರಿಗಳಿಗೆ ಒದಗಿಸಬೇಕು ಎಂದು ನ್ಯಾಯಾಲಯ ತಿಳಿಸಿತು.
ಐಎನ್‌ಎಕ್ಸ್ ಮೀಡಿಯಾ ಪ್ರಕರಣ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಲ್ಲಿನ (ಎಫ್‌ಐಪಿಬಿ) ಅಕ್ರಮಕ್ಕೆ ಸಂಬಂಧಿಸಿದ್ದಾಗಿದ್ದು, ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾಕ್ಕೆ ಅನುಮತಿ ನೀಡುವಾಗ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಐಎನ್‌ಎಕ್ಸ್ ಮೀಡಿಯಾ ಪ್ರವರ್ತಕರಾದ ಪೀಟರ್ ಮತ್ತು ಇಂದ್ರಾಣಿ ಅವರಿಂದ ಅನುಮತಿಗಾಗಿ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ಲಂಚ ಪಡೆದಿದ್ದಾರೆ ಎಂಬುದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ದೂರಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರಿಗೆ ಮಾರ್ಚ್ 2018ರಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು. ಆಗ ಅನುಮತಿಯಿಲ್ಲದೆ ವಿದೇಶ ಪ್ರಯಾಣ ಕೈಗೊಳ್ಳುವಂತಿಲ್ಲ ಎಂದು ಷರತ್ತು ವಿಧಿಸಲಾಗಿತ್ತು.
ತಮ್ಮ ವೃತ್ತಿಯ ಕಾರಣಕ್ಕೆ ಇಂಗ್ಲೆಂಡ್, ಸ್ಪೇನ್, ಫ್ರಾನ್ಸ್, ಇಟಲಿ, ಜರ್ಮನಿ ಹಾಗೂ ಅಮೆರಿಕಾದಂತಹ ದೇಶಗಳಿಗೆ ಆಗಾಗ ಪ್ರಯಾಣಿಸಬೇಕಾಗುತ್ತದೆ. ಪ್ರತೀ ಬಾರಿ ಅನುಮತಿ ಪಡೆಯುವುದು ಕಷ್ಟಕರವಾಗಿದೆ ಎಂದು ಕಾರ್ತಿ ವಾದಿಸಿದ್ದರು. ಸಿಬಿಐ ಈ ಮನವಿಯನ್ನು ವಿರೋಧಿಸಿತ್ತು.
ಕಾರ್ತಿ ಪರ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರಾ ಮತ್ತವರ ತಂಡ ಹಾಗೂ ಸಿಬಿಐ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅನುಪಮ್ ಎಸ್ ಶರ್ಮಾ ಮತ್ತಿತರರು ವಾದ ಮಂಡಿಸಿದ್ದರು.