ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ವಿರುದ್ಧದ ವಂಚನೆ ಪ್ರಕರಣವನ್ನು ಪುನರಾರಂಭಿಸುವ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್ ಸೋಮವಾರ ತಡೆಹಿಡಿದಿದೆ.
ವಸತಿ ಯೋಜನೆಗೆ ಸಂಬಂಧಿಸಿದ ವಂಚನೆ ಪ್ರಕರಣದಿಂದ ಗಂಭಿರ್ ಅವರನ್ನು ಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ನ್ಯಾಯಾಲಯ ರದ್ದುಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಗಂಭೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು ಇಂದು ಗಂಭೀರ್ ವಿರುದ್ಧ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಿತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಆದೇಶವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಹಣ ಪಡೆದು ಮನೆಗಳನ್ನು ನೀಡಲು ವಿಫಲವಾದ ಗೌತಮ್ ಗಂಭೀರ್ ನಂಟು ಹೊಂದಿರುವ ಮೂರು ರಿಯಲ್ ಎಸ್ಟೇಟ್ ಕಂಪೆನಿಗಳಾದ ರುದ್ರಾ ಬಿಲ್ಡ್‌ವೆಲ್ ರಿಯಾಲ್ಟಿ, ಎಚ್‌ಆರ್ ಇನ್‌ಫ್ರಾಸಿಟಿ ಮತ್ತು ಯುಎಂ ಆರ್ಕಿಟೆಕ್ಚರ್ಸ್ ವಿರುದ್ಧ ಮನೆ ಖರೀದಿದಾರರು ಪ್ರಕರಣ ದಾಖಲಿಸಿದ್ದರು. ಗಂಭೀರ್ ಅವರು ರುದ್ರಾದ ಹೆಚ್ಚುವರಿ ನಿರ್ದೇಶಕರಲ್ಲದೆ, ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನೂ ಪ್ರಕರಣದ ಆರೋಪಿಯನ್ನಾಗಿ ಮಾಡಲಾಗಿತ್ತು.
ಆದರೆ ಮೂರು ವ್ಯಕ್ತಿಗಳು ಮತ್ತು ಎರಡು ಕಂಪನಿಗಳ ವಿರುದ್ಧ ಮಾತ್ರ 2020ರಲ್ಲಿ ಮೇಲ್ನೋಟಕ್ಕೆ ದೋಷ ಇರುವುದಾಗಿ ತಿಳಿಸಿದ್ದ ವಿಚಾರಣಾ ನ್ಯಾಯಾಲಯ ಗಂಭೀರ್ ಸೇರಿದಂತೆ ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿ ಮೂರು ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಪ್ರಕರಣ ಮುಕ್ತಾಯಗೊಳಿಸುವಂತೆ ಮ್ಯಾಜಿಸ್ಟೇಟ್ ನ್ಯಾಯಾಲಯ ನೀಡಿದ ಆದೇಶ ಸಂಸದರಾಗಿದ್ದ ಗಂಭೀರ್ ಅವರ ವಿರುದ್ಧದ ಆರೋಪಗಳ ಕುರಿತು ತೀರ್ಪು ನೀಡುವಲ್ಲಿ 'ಮನಸ್ಸೊಂದರ ಅಸಮರ್ಪಕ ಅಭಿವ್ಯಕ್ತಿ'ಯಾಗಿದೆ ಎಂದು ಸೆಷನ್ಸ್ ನ್ಯಾಯಾಲಯ ಹೇಳಿತ್ತು. ಹೀಗಾಗಿ ಗಂಭೀರ್ ವಿರುದ್ಧದ ಆರೋಪ ಕುರಿತು ಹೊಸ ಆದೇಶ ನೀಡುವಂತೆ ಸೂಚಿಸಿತ್ತು.
ನಡೆದಿರುವ ವಂಚನೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಅನುಸೂಚಿತ ಅಪರಾಧವಾಗಿರುವುದರಿಂದ, ಪ್ರಕರಣವನ್ನು ಇ ಡಿ ತನಿಖೆ ಮಾಡಬೇಕಾದ ಅಗತ್ಯ ಬೀಳಬಹುದು ಎಂದು ಅದು ಹೇಳಿತ್ತು. ಈ ಆದೇಶವನ್ನು ಗಂಭೀರ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಗಂಭೀರ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ ರುದ್ರಾ ಕಂಪೆನಿಯ ಹೆಚ್ಚುವರಿ ನಿರ್ದೇಶಕರಾಗಿ ಗಂಭೀರ್ ಯಾರೊಂದಿಗೂ ವ್ಯವಹಾರ ನಡೆಸಿಲ್ಲ. ಹೀಗಾಗಿ ಪ್ರಕರಣದ ತನಿಖೆ ಗಂಭೀರ್‌ಗೆ ನೀಡುವ ಕಿರುಕುಳವಾಗಲಿದೆ ಎಂದರು.
ಗಂಭೀರ್ ದಾಖಲೆಗಳು ಕಳಂಕರಹಿತವಾಗಿವೆ. ಬ್ರಾಂಡ್ ಅಂಬಾಸಿಡರ್ ಆಗುವುದು ಸಹಜ. ಇದು (ತನಿಖೆ ಮುಂದುವರೆಸುವುದ) ಸಂಪೂರ್ಣ ಕಿರುಕುಳವಾಗುತ್ತದೆ’ ಎಂದು ರೋಹಟ್ಗಿ ವಾದಿಸಿದರು.