ಫೆಮಾ ತನಿಖೆಯ ಮಾಹಿತಿ ಸೋರಿಕೆ ಮಾಡದಂತೆ ಮಹುವಾ ಸಲ್ಲಿಸಿದ್ದ ಅರ್ಜಿ: ನಾಳೆ ತೀರ್ಪು ನೀಡಲಿದೆ ದೆಹಲಿ ಹೈಕೋರ್ಟ್

ಫೆಮಾ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೂಕ್ಷ್ಮ ಮತ್ತು ಪರಿಶೀಲಿಸದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದೆ ಎಂದು ಮಹುವಾ ಆರೋಪಿಸಿದ್ದರು.
ಮಹುವಾ ಮೊಯಿತ್ರಾ, ದೆಹಲಿ ಹೈಕೋರ್ಟ್
ಮಹುವಾ ಮೊಯಿತ್ರಾ, ದೆಹಲಿ ಹೈಕೋರ್ಟ್

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ- 1999 (ಫೆಮಾ) ಉಲ್ಲಂಘಿಸಿದ ಆರೋಪದ ಮೇಲೆ ತನ್ನ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಸೂಕ್ಷ್ಮ ಮತ್ತು ಪರಿಶೀಲಿಸದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ನಿರ್ದೇಶನ ನೀಡಬೇಕೆಂದು ಕೋರಿ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ದೆಹಲಿ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.

ವಾದ ಆಲಿಸಿದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ತೀರ್ಪನ್ನು ಕಾಯ್ದಿರಿಸಲಾಗಿದ್ದು ನಾಳೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಫೆಮಾ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೂಕ್ಷ್ಮ ಮತ್ತು ಪರಿಶೀಲಿಸದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದೆ ಎಂದು ಮಹುವಾ ಆರೋಪಿಸಿದ್ದರು.

ತಾನು ಮಾಧ್ಯಮಗಳಿಗೆ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಿಲ್ಲ ಮತ್ತು ಈ ಪ್ರಕರಣದಲ್ಲಿ ಮೊಯಿತ್ರಾ ಅವರಿಗೆ ಸಮನ್ಸ್‌ ನೀಡಿದ್ದ ಮಾಹಿತಿಯನ್ನು ಮಾಧ್ಯಮಗಳಿಗೆ ಹೇಗೆ ತಿಳಿಸಲಾಯಿತು ಎಂಬುದು ತನಗೆ ತಿಳಿದಿಲ್ಲ ಎಂದು ಇ ಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಮಹುವಾ ಮೊಯಿತ್ರಾ ಪರವಾಗಿ ಹಾಜರಾದ ಹಿರಿಯ ವಕೀಲೆ ರೆಬೆಕಾ ಜಾನ್ , ಸಮನ್ಸ್ ಸ್ವೀಕರಿಸುವ ಮೊದಲೇ ಪ್ರಕರಣದ ಬಗ್ಗೆ ಮಾಧ್ಯಮಗಳು ಮಾಹಿತಿಯನ್ನು ಪ್ರಕಟಿಸಿವೆ. ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮೊಯಿತ್ರಾ ಅವರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.

"ಜಾರಿ ನಿರ್ದೇಶನಾಲಯದ ತನಿಖೆ ನಡೆಸುವ ಹಕ್ಕಿಗೆ ವಿರೋಧಿಸುತ್ತಿಲ್ಲ. ಅವರ ಅಧಿಕಾರ ವ್ಯಾಪ್ತಿಗೆ ಶರಣಾಗುವುದಾಗಿ ಮಹುವಾ ಹೇಳುತ್ತಿದ್ದಾರೆ. ಆದರೆ, ಈ ವಿಷಯ ನನಗೆ ತಿಳಿಯುವ ಮೊದಲೇ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾದ ಕುರಿತಾದದ್ದು. ಇ ಡಿ ಮಾಧ್ಯಮಗಳಿಗೆ ಗೌಪ್ಯ ಮಾಹಿತಿಯನ್ನು ನೀಡುತ್ತಿದೆ" ಎಂದು ರೆಬೆಕಾ ಆರೋಪಿಸಿದರು.

ಆದರೆ ಪ್ರಕರಣ ಆಲಿಸುವುದಕ್ಕೂ ಮುನ್ನವೇ ಮೊದಲೇ ಮೊಯಿತ್ರಾ ನ್ಯಾಯಾಲಯದ ಮೆಟ್ಟಿಲೇರಿದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಹೇಗೆ ಪ್ರಕಟಿಸಲಾಯಿತು ಎಂದು ನ್ಯಾಯಾಲಯ ಜಾನ್ ಅವರನ್ನು ಕೇಳಿತು. "ನಿಮ್ಮದು ಸಾರ್ವಜನಿಕ ವ್ಯಕ್ತಿತ್ವ, ನೀವು ಸಾರ್ವಜನಿಕ ವ್ಯಕ್ತಿ," ಎಂದು ಮಹುವಾ ಅವರನ್ನುದ್ದೇಶಿಸಿ ನ್ಯಾಯಮೂರ್ತಿ ಪ್ರಸಾದ್ ಹೇಳಿದರು.

ಎಎನ್ಐ ಪರವಾಗಿ ವಕೀಲ ಸಿದ್ಧಾಂತ್ ಕುಮಾರ್, ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ವಾದ ಮಂಡಿಸಿದರು.

ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಾಧ್ಯಮ ಸಂಸ್ಥೆಗಳನ್ನು ಪಕ್ಷಕಕಾರನ್ನಾಗಿ ಮಾಡಿರುವ ಮಹುವಾ ತಮ್ಮ ವಿರುದ್ಧ ಯಾವುದೇ "ಪರಿಶೀಲಿಸದ, ದೃಢೀಕರಿಸದ, ಸುಳ್ಳು, ಅವಹೇಳನಕಾರಿ ವಿಷಯವನ್ನು" ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ಮತ್ತು ಎಲ್ಲಾ ವರದಿ ಮತ್ತು ಪ್ರಕಟಣೆಗಳು ಇ ಡಿ ಹೊರಡಿಸಬಹುದಾದ ಅಧಿಕೃತ ಪತ್ರಿಕಾ ಪ್ರಕಟಣೆಗಳಿಗೆ ಅನುಗುಣವಾಗಿವೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.

ಎಎನ್ಐ, ಬಿಸಿನೆಸ್ ಟುಡೇ, ಎಕನಾಮಿಕ್ ಟೈಮ್ಸ್, ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌, ಹಿಂದೂಸ್ತಾನ್ ಟೈಮ್ಸ್, ಇಂಡಿಯಾ ಟಿವಿ, ಇಂಡಿಯನ್ ಎಕ್ಸ್‌ಪ್ರೆಸ್‌, ಮಿಂಟ್, ಮನಿಕಂಟ್ರೋಲ್, ಎನ್‌ಡಿಟಿವಿ, ಟೈಮ್ಸ್ ಗ್ರೂಪ್ ಮತ್ತಿತರ ಮಾಧ್ಯಮ ಸಂಸ್ಥೆಗಳನ್ನು ಪಕ್ಷಕಾರರನ್ನಾಗಿ ಮೊಯಿತ್ರಾ ಉಲ್ಲೇಖಿಸಿದ್ದರು.

ಸಮನ್ಸ್ ಸ್ವೀಕರಿಸುವ ಮೊದಲೇ ಇ ಡಿ ತನ್ನ ಸಮನ್ಸ್ ಬಗೆಗಿನ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ. ತನ್ನ ವಿರುದ್ಧದ ಆರೋಪಗಳ ವಿವರಗಳನ್ನು ಮತ್ತು ತನಿಖೆಗೆ ಹಾಜರಾಗಲು ಹೆಚ್ಚಿನ ಸಮಯ ಕೇಳಿದ್ದೇನೆ ಎಂಬ ಅಂಶಗಳನ್ನು ಇ ಡಿ ಸೋರಿಕೆ ಮಾಡಿದೆ. ಹೀಗೆ ಮಾಹಿತಿ ಸೋರಿಕೆ ಮಾಡುವುದು ತನಿಖಾ ಪ್ರಕ್ರಿಯೆಗೆ ಅಡ್ಡಿಯಾಗಲಿದ್ದು ತಮ್ಮ ಖಾಸಗಿತನ, ಸಂಬಂಧಪಟ್ಟ ವ್ಯಕ್ತಿಯ ಘನತೆ ಮತ್ತು ನ್ಯಾಯಯುತ ತನಿಖೆಯಂತಹ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಮಹುವಾ ದೂರಿದ್ದರು.

ಇ ಡಿ ಕಳೆದ ವಾರ ಮಹುವಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಫೆಬ್ರವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಕೆಲವು ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ದೆಹಲಿಯ ಇ ಡಿ ಪ್ರಧಾನ ಕಚೇರಿಗೆ ಹಾಜರಾಗುವಂತೆ ಅವರಿಗೆ ತಿಳಿಸಲಾಗಿತ್ತು. ಲೋಕಪಾಲ್ ಉಲ್ಲೇಖದ ಮೇರೆಗೆ ಸಿಬಿಐ ಕೂಡ ಅವರ ವಿರುದ್ಧದ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿತ್ತು.

Related Stories

No stories found.
Kannada Bar & Bench
kannada.barandbench.com