ನಿಶಿಕಾಂತ್ ದುಬೆ, ಜೈ ಅನಂತ್ ದೆಹದ್ರಾಯ್ ವಿರುದ್ಧ ಮಹುವಾ ಸಲ್ಲಿಸಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ಲೋಕಸಭಾ ನೈತಿಕ ಸಮಿತಿಯ ವರದಿ ಸಲ್ಲಿಸಿ ಮತ್ತು ಮೊಯಿತ್ರಾ ಮತ್ತು ದರ್ಶನ್ ಹಿರಾನಂದಾನಿ ನಡುವೆ ಏನಾದರೂ ಹೊಂದಾಣಿಕೆ ಇದೆಯೇ ಎಂದು ತೋರಿಸುವಂತೆ ನ್ಯಾಯಮೂರ್ತಿ ಸಚಿನ್ ದತ್ತಾ ಅವರು ದೆಹದ್ರಾಯ್ ಮತ್ತು ದುಬೆ ಅವರಿಗೆ ಸೂಚಿಸಿದ್ದಾರೆ.
Mahua Moitra, Delhi High Court
Mahua Moitra, Delhi High Court

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೆಹದ್ರಾಯ್ ವಿರುದ್ಧ ಮಧ್ಯಂತರ ಪರಿಹಾರ ಕೋರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.

ದುಬೆ ಮತ್ತು ದೆಹದ್ರಾಯ್ ವಿರುದ್ಧ ಮೊಯಿತ್ರಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಮೊಯಿತ್ರಾ ಮತ್ತು ಉದ್ಯಮಿ ಹಿರಾನಂದಾನಿ ನಡುವೆ ಏನಾದರೂ ಹೊಂದಾಣಿಕೆ ಇದೆಯೇ ಎಂದು ದುಬೆ ಮತ್ತು ದೆಹದ್ರಾಯ್ ಅವರನ್ನು ಪ್ರಶ್ನಿಸಿದರು.

ಮೊಯಿತ್ರಾ ಅವರು ಸಂಸತ್ತಿನಲ್ಲಿ ಹಿರಾನಂದಾನಿ ಸೂಚಿಸಿದಂತೆ ಪ್ರಶ್ನೆ ಕೇಳಿದ್ದು ಅದಕ್ಕಾಗಿ ದುಬಾರಿ ಉಡುಗೊರೆ ಪಡೆದಿದ್ದಾರೆ. ಅಲ್ಲದೇ ತಮ್ಮ ಸಂಸತ್ತಿನ ಖಾತೆ ಲಾಗ್ ಇನ್ ಅಂಶಗಳನ್ನು ಹಂಚಿಕೊಂಡಿದ್ದಾರೆ ಎಂದು ದೆಹದ್ರಾಯ್ ಮತ್ತು ದುಬೆ ಆರೋಪಿಸಿದ್ದಾರೆ. ಈ ಆರೋಪಗಳ ಆಧಾರದ ಮೇಲೆ, ಲೋಕಸಭಾ ನೈತಿಕ ಸಮಿತಿಯು ಮೊಯಿತ್ರಾ ಅವರನ್ನು ಲೋಕಸಭೆಯಿಂದ ತೆಗೆದುಹಾಕಲು ಸೂಚಿಸಿತ್ತು, ನಂತರ ಅವರನ್ನು ಡಿಸೆಂಬರ್ 8 ರಂದು ಸಂಸತ್ತಿನಿಂದ ಉಚ್ಛಾಟಿಸಲಾಗಿದೆ.

ದೆಹದ್ರಾಯ್ ಅವರ ವಕೀಲ, ಹಿರಿಯ ವಕೀಲ ಸಂಜೋಯ್ ಘೋಷ್ ಮತ್ತು ದುಬೆ ಅವರ ವಕೀಲ ಅಭಿಮನ್ಯು ಭಂಡಾರಿ ಅವರು ಮೊಯಿತ್ರಾ ಅವರು ಹಿರಾನಂದಾನಿ ಅವರಿಂದ ಉಡುಗೊರೆಗಳು ಮತ್ತು ಇತರ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ವಾದಿಸಿದರು. ಘೋಷ್ ಮತ್ತು ಭಂಡಾರಿ ಅವರು ಸಂಸತ್ತಿನ ನೈತಿಕ ಸಮಿತಿಯ ವರದಿಯನ್ನು ಉಲ್ಲೇಖಿಸಿದರು ಮತ್ತು ಸಮಿತಿಯು ಸಹ ಮೊಯಿತ್ರಾ ಅವರು ಉಡುಗೊರೆ ಪಡೆದಿರುವುದನ್ನು ಕಂಡುಕೊಂಡಿದೆ, ಇದು ಅಂತಿಮವಾಗಿ ಮೊಯಿತ್ರಾ ಅವರನ್ನು ಹೊರಹಾಕಲು ಕಾರಣವಾಯಿತು ಎಂದು ಹೇಳಿದರು. ನೈತಿಕ ಸಮಿತಿಯ ವರದಿಯ ಸಂಬಂಧಿತ ಸಾರವನ್ನು ದಾಖಲೆಯಲ್ಲಿ ಇರಿಸುವಂತೆ ನ್ಯಾಯಮೂರ್ತಿ ದತ್ತಾ ಪ್ರತಿವಾದಿಗಳಿಗೆ ಸೂಚಿಸಿದರು.

ಮೊಯಿತ್ರಾ ಪರವಾಗಿ ಹಾಜರಾದ ವಕೀಲ ಸಮುದ್ರ ಸಾರಂಗಿ ಅವರು ಮೊಯಿತ್ರಾ ಅವರು ಹಿರಾನಂದಾನಿಯಿಂದ ಕೆಲವು ಉಡುಗೊರೆಗಳನ್ನು ಸ್ವೀಕರಿಸಿದ್ದರೂ, ಮೊಯಿತ್ರಾ ಮತ್ತು ಹಿರಾನಂದಾನಿ ಸ್ನೇಹಿತರು ಮತ್ತು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಉಡುಗೊರೆ ಪಡೆದಿಲ್ಲ. ದೆಹದ್ರಾಯ್ ಮತ್ತು ದುಬೆ ಇನ್ನೂ ಮೊಯಿತ್ರಾ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಹಾಗೆ ಮಾಡದಂತೆ ಅವರನ್ನು ತಡೆಯಬೇಕು ಎಂದು ಕೋರಿದರು.

ಮಾನಹಾನಿಕರ ಆರೋಪಗಳನ್ನು ಮಾಡಿದ ನಂತರ ನೈತಿಕ ಸಮಿತಿಯ ವರದಿ ಬಂದಿದೆ ಹಾಗಾಗಿ ಪ್ರತಿವಾದಿಗಳು ಈಗ ಅದನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ಸಾರಂಗಿ ಹೇಳಿದರು.

ಏತನ್ಮಧ್ಯೆ, ಮೊಯಿತ್ರಾ ಕೇಳಿದ 61 ಪ್ರಶ್ನೆಗಳಲ್ಲಿ ಕನಿಷ್ಠ 50 ಪ್ರಶ್ನೆಗಳು ಹಿರಾನಂದಾನಿ ಅವರ ವ್ಯವಹಾರ ಹಿತಾಸಕ್ತಿಗಳಿಗೆ ಸಂಬಂಧಿಸಿವೆ ಮತ್ತು ಮೊಯಿತ್ರಾ ಅವರ ಐಡಿಯಿಂದ ಒಂದೇ ದಿನ ಕೋಲ್ಕತ್ತಾ, ದೆಹಲಿ ಮತ್ತು ನ್ಯೂಜೆರ್ಸಿಯಿಂದ ಲಾಗ್ ಇನ್ ಆಗಲಾಗಿದೆ ಎಂದು ತೋರಿಸಲು ದಾಖಲೆ ಪುರಾವೆಗಳಿವೆ ಎಂದು ಘೋಷ್ ವಾದಿಸಿದರು.

Related Stories

No stories found.
Kannada Bar & Bench
kannada.barandbench.com