ಸ್ಪೈಡರ್ ಮ್ಯಾನ್- ಅಕ್ರಾಸ್ ದ ಸ್ಪೈಡರ್‌ವರ್ಸ್ ಮತ್ತು ಆ ಸರಣಿಯ ಮೊದಲ ಸಿನಿಮಾ (ಪ್ರೀಕ್ವೆಲ್) ಸ್ಪೈಡರ್ ಮ್ಯಾನ್- ಇನ್ ಟು ದ ಸ್ಪೈಡರ್‌ವರ್ಸ್ ಚಿತ್ರಗಳನ್ನು ಪ್ರಸಾರ ಮಾಡದಂತೆ 100 ಕ್ಕೂ ಹೆಚ್ಚು ಅಕ್ರಮ ಜಾಲತಾಣಗಳಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ಬಂಧ ವಿಧಿಸಿದೆ.
ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡದಂತೆ ಜಾಲತಾಣಗಳನ್ನು ಪ್ರತಿಬಂಧಿಸಲು ಅಂತರ್ಜಾಲ ಸೇವಾ ಪೂರೈಕೆದಾರರಿಗೆ (ISP) ನಿರ್ದೇಶಿಸಿ ಮೇ 29ರಂದು ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಅಧಿಸೂಚನೆ ಹೊರಡಿಸಲು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚಿತ್ರದ ಹಕ್ಕುಸ್ವಾಮ್ಯ ಹೊಂದಿರುವ ಸೋನಿ ಪಿಕ್ಚರ್ಸ್ ಅನಿಮೇಷನ್ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ʼಅಕ್ರಾಸ್ ದ ಸ್ಪೈಡರ್‌ವರ್ಸ್ʼ ಚಿತ್ರ ಜೂನ್ 2 ರಂದು ಬಿಡುಗಡೆಗೆ ಸಿದ್ಧವಾಗಿದೆ ಎಂದು ಸೋನಿ ಹೇಳಿದ್ದು ಚಿತ್ರದ ಹಕ್ಕುಸ್ವಾಮ್ಯ ಮತ್ತು ಪ್ರಸಾರದ ಹಕ್ಕುಗಳು ತನ್ನ ಬಳಿ ಇದ್ದರೂ ಅಕ್ರಮ ಜಾಲತಾಣಗಳು ಚಿತ್ರದ ಮುಂದಿನ ಪ್ರಸಾರದ ಬಗ್ಗೆ ಜಾಹೀರಾತು ನೀಡುತ್ತಿವೆ ಎಂದು ದೂರಿತ್ತು.
ಮೇಲ್ನೋಟಕ್ಕೆ ಪ್ರಕರಣ ಸೋನಿ ಪರವಾಗಿದೆ ಎಂದ ನ್ಯಾಯಾಲಯ ಮಧ್ಯಂತರ ಪ್ರತಿಬಂಧಕಾದೇಶ ನೀಡಿತು, ಜೊತೆಗೆ ಮೊಕದ್ದಮೆಗೆ ಸಂಬಂಧಿಸಿದಂತೆ ನೋಟಿಸ್ ಕೂಡ ಜಾರಿ ಮಾಡಿದ ನ್ಯಾಯಾಲಯ ಜುಲೈ 31ರಂದು ಜಂಟಿ ರಿಜಿಸ್ಟ್ರಾರ್ ಎದುರು ಮುಂದಿನ ಪರಿಗಣನೆಗಾಗಿ ಪಟ್ಟಿ ಮಾಡಿತು.