ಉತ್ತರಾಖಂಡ ಶಾಸಕನ ಅಶ್ಲೀಲ ವಿಡಿಯೋ ಪ್ರಸಾರ ಮಾಡದಂತೆ ಬಿಜೆಪಿ ಮುಖಂಡನಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

ಇದು 'ಡೀಪ್‌ ಫೇಕ್‌' ಎ ಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ದೃಶ್ಯಾವಳಿ ಎಂದು ವೀಡಿಯೊದಲ್ಲಿ ಶಾಸಕರೊಂದಿಗೆ ಇದ್ದಾರೆನ್ನಲಾದ ಮಹಿಳೆ ದಾವೆ ಹೂಡಿದ ಹಿನ್ನೆಲೆಯಲ್ಲಿ ನ್ಯಾ. ಸಂಜೀವ್ ನರುಲಾ ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್

ಉತ್ತರಾಖಂಡ ಪಕ್ಷೇತರ ಶಾಸಕ ಉಮೇಶ್ ಕುಮಾರ್ ಅವರು ಮಹಿಳೆಯೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ ಅಶ್ಲೀಲ ದೃಶ್ಯ ಪ್ರಸಾರ ಮಾಡದಂತೆ ಬಿಜೆಪಿ ನಾಯಕ ಕುನ್ವರ್ ಪ್ರಣವ್ ಸಿಂಗ್ ಚಾಂಪಿಯನ್ ಅವರಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ಬಂಧ ವಿಧಿಸಿದೆ [ಹೆಸರು ಉಲ್ಲೇಖಿಸಿರದ ಮಹಿಳೆ ಮತ್ತು ಫೇಸ್‌ಬುಕ್‌ ಇನ್ನಿತರರ ನಡುವಣ ಪ್ರಕರಣ]

ಉತ್ತರಾಖಂಡದ ಖಾನ್ಪುರ ಕ್ಷೇತ್ರದ ವಿಧಾನಸಭಾ ಸದಸ್ಯರಾಗಿರುವ ಕುಮಾರ್‌ ಮತ್ತು ಮಹಿಳೆ ಇರುವ ಅಶ್ಲೀಲ ವೀಡಿಯೊ ಕ್ಲಿಪ್ ಪ್ರಸಾರ ಮಾಡದಂತೆ ನ್ಯಾಯಮೂರ್ತಿ ಸಂಜೀವ್ ನರುಲಾ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ಚಾಂಪಿಯನ್ ಮತ್ತಿತರರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ವೀಡಿಯೊಗಳನ್ನು ತೆಗೆದುಹಾಕುವಂತೆಯೂ ನ್ಯಾಯಾಲಯ ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್, ಎಕ್ಸ್‌ ಹಾಗೂ ಫೇಸ್‌ಬುಕ್‌ಗೆ ನಿರ್ದೇಶಿಸಿದೆ.

ಇದು 'ಡೀಪ್‌ ಫೇಕ್‌' ಎ ಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ದೃಶ್ಯಾವಳಿ ಎಂದು ವೀಡಿಯೊದಲ್ಲಿ ಶಾಸಕರೊಂದಿಗೆ ಇದ್ದಾರೆನ್ನಲಾದ ಮಹಿಳೆ ದಾವೆ ಹೂಡಿದ್ದರು. ಖಾನ್ಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವ ಚಾಂಪಿಯನ್ ಮತ್ತು ಕುಮಾರ್ ನಡುವಿನ ರಾಜಕೀಯ ಜಗಳಕ್ಕೆ ತನ್ನನ್ನು ಎಳೆದು ತರಲಾಗುತ್ತಿದೆ ಎಂದು ಅವರು ದೂರಿದ್ದರು.

ಮಹಿಳೆಯ ಖಾಸಗಿತನದ ಹಕ್ಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ ಮಧ್ಯಂತರ ಪರಿಹಾರ ನೀಡಿತು. ಆದರೆ, ಚಾಂಪಿಯನ್‌ ಪತ್ರಿಕಾಗೋಷ್ಠಿ ನಡೆಸಿದ್ದ ವೀಡಿಯೊವನ್ನು ತೆಗೆದುಹಾಕುವಂತೆ ಆದೇಶಿಸಲು ನ್ಯಾಯಾಲಯ ನಿರಾಕರಿಸಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 2024ರಲ್ಲಿ ನಡೆಯಲಿದೆ.

Kannada Bar & Bench
kannada.barandbench.com