ಹಕ್ಕುಸ್ವಾಮ್ಯ ಉಲ್ಲಂಘನೆ: 'ಮಾನ್ಸೂನ್ ಹಾರ್ವೆಸ್ಟ್' ಬಳಸದಂತೆ ಆಹಾರ ಕಂಪನಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

ಎರಡು ಹೆಸರುಗಳು ದೃಶ್ಯಾತ್ಮಕವಾಗಿ ಮತ್ತು ಉಚ್ಚಾರಣೆಯಲ್ಲಿ ಹೋಲುವುದರಿಂದ ಮೇಲ್ನೋಟಕ್ಕೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಹಕ್ಕುಸ್ವಾಮ್ಯ ಉಲ್ಲಂಘನೆ: 'ಮಾನ್ಸೂನ್ ಹಾರ್ವೆಸ್ಟ್' ಬಳಸದಂತೆ ಆಹಾರ ಕಂಪನಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

ತನ್ನ ವಾಣಿಜ್ಯ ಚಿಹ್ನೆಯನ್ನು ಹೋಲುವ ಯಾವುದೇ ವಾಣಿಜ್ಯ ಚಿಹ್ನೆ ಬಳಸದಂತೆ ʼಮಾನ್ಸೂನ್‌ ಹಾರ್ವೆಸ್ಟ್‌ ಫಾರ್ಮ್ಸ್‌ʼ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು ಈ ಹಿನ್ನೆಲೆಯಲ್ಲಿ 'ಮಾನ್ಸೂನ್ ಹಾರ್ವೆಸ್ಟ್', 'ವಿನ್‌ಗ್ರೀನ್ಸ್‌ ಮಾನ್ಸೂನ್ ಹಾರ್ವೆಸ್ಟ್' ಹೆಸರನ್ನು ಬಳಸದಂತೆ ಆಹಾರ ಮತ್ತು ಪಾನೀಯಗಳ ಸಂಸ್ಥೆಯಾದ ಗ್ರೀನ್ ಲೈಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

'ಮಾನ್ಸೂನ್ ಹಾರ್ವೆಸ್ಟ್ ಫಾರ್ಮ್ಸ್' ವಾಣಿಜ್ಯ ಚಿಹ್ನೆಯ ಮಾಲೀಕರು ಆ ವಾಣಿಜ್ಯ ಚಿಹ್ನೆಯ ಪ್ರಥಮ ಬಳಕೆದಾರರಾಗಿದ್ದು ಎರಡು ಹೆಸರುಗಳು ದೃಶ್ಯಾತ್ಮಕವಾಗಿ ಮತ್ತು ಉಚ್ಚಾರಣೆಯಲ್ಲಿ ಹೋಲಿಕೆಯಾಗುವುದರಿಂದ ಮೇಲ್ನೋಟಕ್ಕೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಆದೇಶ ನೀಡಿದ್ದಾರೆ.

Also Read
‘ವರಾಹರೂಪಂ’ ಹಕ್ಕುಸ್ವಾಮ್ಯ ಉಲ್ಲಂಘನೆ: ನಟ ಪೃಥ್ವಿರಾಜ್ ವಿರುದ್ಧದ ಎಫ್ಐಆರ್‌ಗೆ ಕೇರಳ ಹೈಕೋರ್ಟ್ ತಡೆ

ಪ್ರೀತೇಂದ್ರ ಸಿಂಗ್ ಔಲಾಖ್ ಎಂಬುವವರು ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾ. ಚಾವ್ಲಾ ವಿಚಾರಣೆ ನಡೆಸಿದರು. ತನ್ನ ಕುಟುಂಬದ ಮೂಲಕ 1970ರ ದಶಕದಿಂದಲೂ ಖಾದ್ಯ ತೈಲಗಳು, ಕಚ್ಚಾ ಮತ್ತು ಸಂಸ್ಕರಿಸದ ಕೃಷಿ, ತೋಟಗಾರಿಕಾ ಉತ್ಪನ್ನಗಳ ಜೊತೆಗೆ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಫಿರ್ಯಾದಿದಾರರು ತಿಳಿಸಿದ್ದರು. ತಮ್ಮ ಸಂಸ್ಥೆ  ನವೆಂಬರ್ 2006ರಲ್ಲಿ 'ಮಾನ್ಸೂನ್ ಹಾರ್ವೆಸ್ಟ್ ಫಾರ್ಮ್ಸ್' ಮತ್ತು ಅದೇ ಹೆಸರಿನ ಸಾಧನ ಚಿಹ್ನೆ ಬಳಸಲು ಪ್ರಾರಂಭಿಸಿತು ಎಂದು ಅವರು ಹೇಳಿದ್ದರು.

ಇನ್ನೊಂದೆಡೆ ಪ್ರತಿವಾದಿ ಸಂಸ್ಥೆ ಗ್ರೀನ್ ಲೈಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ 2015ರಿಂದ ತಾನು ರಾಗಿ ಆಧಾರಿತ ಪೌಷ್ಟಿಕಾಂಶ ಬಾರ್‌, ಕುಕೀಸ್‌, ಮ್ಯೂಸ್ಲಿ, ಗ್ರಾನೋಲಾ, ಉಪಹಾರ ಧಾನ್ಯಗಳು, ನಟ್ ಬಾರ್‌ಗಳು, ಗ್ರಾನೋಲಾ ಬಾರ್‌, ಎನರ್ಜಿ ಬಾರ್‌, ಸ್ನ್ಯಾಕ್ ಬಾರ್‌ ಹಾಗೂ ಮಿಠಾಯಿಗಳನ್ನು 'ಮಾನ್ಸೂನ್ ಹಾರ್ವೆಸ್ಟ್' ಚಿಹ್ನೆಯಡಿ ತಯಾರಿಸುತ್ತಿರುವುದಾಗಿ ವಿವರಿಸಿತ್ತು.

ತಾನೀಗ 'ವಿಂಗ್ರೀನ್ಸ್ ಮಾನ್ಸೂನ್ ಹಾರ್ವೆಸ್ಟ್' ಎಂಬ ಹೊಸ ಚಿಹ್ನೆ ಅಳವಡಿಸಿಕೊಂಡಿದ್ದು ಇದು ಫಿರ್ಯಾದಿ ಮತ್ತು ಪ್ರತಿವಾದಿಯ ವಾಣಿಜ್ಯ ಚಿಹ್ನೆಗಳ ನಡುವೆ ವ್ಯಾಪಕ ವ್ಯತ್ಯಾಸ ಸೃಷ್ಟಿಸುತ್ತದೆ. ಆದ್ದರಿಂದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಎಂದು ಅದು ವಾದಿಸಿತ್ತು.  

ಈ ಹಿನ್ನೆಲೆಯಲ್ಲಿ ಕಡಿಮೆ ನೆನಪಿನ ಶಕ್ತಿ ಇರುವ, ಸಾಧಾರಣ ಬುದ್ಧಿವಂತಿಕೆಯ, ಜಾಗೃತನಲ್ಲದ ಖರೀದಿದಾರನ ನೆಲೆಯಿಂದ ನೋಡಿದಾಗ ಎರಡೂ ವಾಣಿಜ್ಯ ಚಿಹ್ನೆಗಳನ್ನು ಪ್ರತ್ಯೇಕಿಸಲು ವಿನ್‌ಗ್ರೀನ್ಸ್‌ ಎಂಬ ಪದ ಸೇರ್ಪಡೆ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಮಧ್ಯಂತರ ಪ್ರತಿಬಂಧಕಾಜ್ಞೆ ಜಾರಿಗೊಳಿಸಿತು.  

Related Stories

No stories found.
Kannada Bar & Bench
kannada.barandbench.com