ಬೇಟೆಯಾಡಲು ಹೋಗಿ ಸಿಂಹಗಳು ರೈಲಿಗೆ ಸಿಲುಕುತ್ತಿವೆ: ರೈಲ್ವೆ ಇಲಾಖೆ ವಾದಕ್ಕೆ ಗುಜರಾತ್ ಹೈಕೋರ್ಟ್ ಸಿಡಿಮಿಡಿ

ದೇಶದ ಹೆಮ್ಮೆಯ ಸಿಂಹಗಳನ್ನು ಹೇಗೆ ಉಳಿಸಬೇಕು ಎಂಬುದರ ಬಗ್ಗೆ ರೈಲ್ವೆ ಮತ್ತು ಅರಣ್ಯ ಅಧಿಕಾರಿಗಳು ಒಗ್ಗೂಡಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪೀಠ ಈ ವೇಳೆ ಬುದ್ಧಿವಾದ ಹೇಳಿದೆ.
ಗುಜರಾತ್ ಹೈಕೋರ್ಟ್, ಸಿಂಹ
ಗುಜರಾತ್ ಹೈಕೋರ್ಟ್, ಸಿಂಹ
Published on

ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹಗಳು ಆಗಾಗ್ಗೆ ರೈಲಿಗೆ ಸಿಲುಕಿ ಸಾವನ್ನಪ್ಪುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ನಿರ್ಲಕ್ಷ್ಯ ತೋರಿದ್ದಕ್ಕಾಗಿ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.

ಬೇಟೆಯಾಡಲು ಹೋಗಿ ಸಿಂಹಗಳು ರೈಲಿಗೆ ಸಿಲುಕಿ ಸಾಯುತ್ತಿವೆ ಎಂಬ ಇಲಾಖೆಯ ವಾದವನ್ನು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಮಯಿ ಅವರಿದ್ದ ಪೀಠ ತಿರಸ್ಕರಿಸಿದೆ.

"ಸಿಂಹಗಳು ಓಡುವುದಿಲ್ಲ, ಅವು ನಿಧಾನವಾಗಿ ನಡೆಯುತ್ತವೆ. ಹಾಗಿರುವಾಗ ಸಿಂಹ ಬೇಟೆಯಾಡಲು ಓಡುತ್ತದೆ ಎಂದು ನಿಮಗೆ ಹೇಗೆ ಅನ್ನಿಸಿತು? ನಿಮಗೆ ಈ ಕಥೆ ಹೇಳಿದ್ದು ಯಾರು? ನಿಮ್ಮ (ರೈಲು) ಚಾಲಕ? ಇದು ಬರೀ ಕಪೋಲ ಕಲ್ಪಿತ" ಎಂದು ಕೋಪದಿಂದ ಮುಖ್ಯ ನ್ಯಾಯಮೂರ್ತಿ ಹೇಳಿದರು.

ಕಳೆದ ಜನವರಿಯಲ್ಲಿ ರೈಲಿಗೆ ಸಿಲುಕಿ ಎರಡು ಸಿಂಹಗಳು ಸಾವನ್ನಪ್ಪಿದ ಬಗ್ಗೆ ಮಾರ್ಚ್ 26 ರಂದು ನಡೆದ ವಿಚಾರಣೆ ವೇಳೆ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ದೇಶದ ಹೆಮ್ಮೆಯ ಸಿಂಹಗಳನ್ನು ಹೇಗೆ ಉಳಿಸಬೇಕು ಎಂಬುದರ ಬಗ್ಗೆ ರೈಲ್ವೆ ಮತ್ತು ಅರಣ್ಯ ಅಧಿಕಾರಿಗಳು ಒಗ್ಗೂಡಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪೀಠ ಬುದ್ಧಿವಾದ ಹೇಳಿತು.

ಸಿಂಹ 'ಕಾಡಿನ ರಾಜ'ನಾಗಿರುವುದರಿಂದ ರಾಜನಂತೆ ವರ್ತಿಸುತ್ತದೆ. ಹಸಿದಾಗ ಮಾತ್ರ ಉಳಿದ ಪ್ರಾಣಿಗಳನ್ನು ಕೊಲ್ಲುತ್ತದೆಯೇ ವಿನಾ ಬೇರೆ ಪ್ರಾಣಿಗಳಂತಲ್ಲ. ಸಿಂಹ ಇರುವ ಅನತಿ ದೂರದಲ್ಲೇ ಪ್ರಾಣಿಗಳು ಓಡಾಡುವುದನ್ನು ಕಾಣಬಹುದು. ಚಿರತೆ ಹುಲಿಗಳಂತೆ ಸಿಂಹ ತನ್ನ ಶಿಕಾರಿಯ ಹಿಂದೆ ಬಹು ಹೊತ್ತಿನವರೆಗೆ ಬೆನ್ನತ್ತಿ ಓಡುವುದಿಲ್ಲ ಎಂದು ನ್ಯಾಯಾಲಯ ನುಡಿಯಿತು.

ಹೀಗಿರುವಾಗ ತನ್ನ ಶಿಕಾರಿಯನ್ನು ಬೆನ್ನಟ್ಟಿ ಸಿಂಹ ರೈಲ್ವೆ ಹಳಿಗಳತ್ತ ಹೋಗುವುದಾದರೂ ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಾಲಯ ಈ ನಿಟ್ಟಿನಲ್ಲಿ ಕತೆ ಕಟ್ಟುವುದು ಬೇಡ ಎಂದು ಎಚ್ಚರಿಕೆ ನೀಡಿತು.

ಅಪಘಾತಗಳು ಈಗ ಕಡಿಮೆಯಾಗಿವೆ ಎಂಬುದನ್ನು ನ್ಯಾಯಾಲಯ ಪ್ರಶಂಸಿಸಬೇಕು ಎಂದು ರೈಲ್ವೆ ಪರ ವಕೀಲರು ಹೇಳಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ "ಅಪಘಾತಗಳು ನಡೆಯಲೇ ಬಾರದು. ಸಂಖ್ಯೆ ಕಡಿಮೆಯಾಗಿದೆ ಎಂದು ಮೆಚ್ಚುಗೆ ಸೂಚಿಸಲಾಗದು. ಇಲಾಖೆಯ ಉದಾಸೀನತೆಯಿಂದ ಹಲವು ಸಿಂಹಗಳು ಪ್ರಾಣ ತೆತ್ತಿವೆ. ಪ್ರತಿದಿನ ಇಲಾಖೆ ಅವುಗಳನ್ನು ಕೊಲ್ಲುವುದನ್ನು ಸಹಿಸಲಾಗದು. ಒಂದು ಸಿಂಹ ನಷ್ಟವಾದರೆ ಅಂತಹ ಸಿಂಹ ಪಡೆಯಲು ಎಷ್ಟು ವರ್ಷ ಬೇಕಾಗುತ್ತದೆ. ಯಾರನ್ನಾದರೂ ಕಳೆದುಕೊಳ್ಳುವುದು ದೊಡ್ಡ ವಿಷಯವಲ್ಲ ಎಂದು ನೀವು ಹೇಳಲಾಗದು" ಎಂದಿತು.

ಈ ನಿಟ್ಟಿನಲ್ಲಿ ರೈಲ್ವೆ ಪರ ವಕೀಲರ ವಿರುದ್ಧವೂ ಸಿಡಿಮಿಡಿಗೊಂಡ ನ್ಯಾಯಾಲಯ "ನೀವು ನಿಮ್ಮ ಅಧಿಕಾರಿಗಳನ್ನು ರಕ್ಷಿಸಲು ಇಲ್ಲಿಲ್ಲ. ಅಪಘಾತದ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಲು ನೀವು ಹೇಗೆ ಯೋಜಿಸುತ್ತೀರಿ ಎಂಬ ಬಗ್ಗೆ ಕೈಗೊಂಡ ದೃಢ ಕ್ರಮವನ್ನು ನೀವು ನ್ಯಾಯಾಲಯಕ್ಕೆ ವಿವರಿಸಬೇಕು" ಎಂದು ಪೀಠ ನುಡಿಯಿತು.

ಗಿರ್‌ ಅಭಯಾರಣ್ಯದ ಸುತ್ತಮುತ್ತ ಮೀಟರ್‌ಗೇಜ್‌ ಬದಲಿಗೆ ಬ್ರಾಡ್‌ಗೇಜ್‌ ಹಳಿ ಅಳವಡಿಸಲು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಯತ್ನಿಸುತ್ತಿರುವುದನ್ನು ವಿವರಿಸುವ ಅಮಿಕಸ್‌ ಕ್ಯೂರಿ ಅವರ ವರದಿ ಉಲ್ಲೇಖಿಸಿದ ನ್ಯಾಯಾಲಯ "ಹಾಗೆ ಪರಿವರ್ತನೆ ಮಾಡಿದರೆ ಅನೇಕ ರೈಲುಗಳು ಇಲ್ಲಿ ಸಂಚರಿಸಿ ಸಿಂಹಗಳಿಗೆ ಮತ್ತಷ್ಟು ಅಪಾಯ ಉಂಟುಮಾಡುತ್ತವೆ" ಎಂದು ಕಳವಳ ವ್ಯಕ್ತಪಡಿಸಿತು.

ಸಿಂಹಗಳು ನಿಶಾಚರ ಪ್ರಾಣಿಗಳಾಗಿದ್ದು ರಾತ್ರಿಯಲ್ಲಿ ಹೆಚ್ಚಾಗಿ ಸಕ್ರಿಯವಾಗಿರುವುದರಿಂದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಸರಕು ರೈಲುಗಳ ಚಲನೆಯನ್ನು ನಿಲ್ಲಿಸಲು ರೈಲ್ವೆ ಪರಿಗಣಿಸಬೇಕು ಎಂದು ಅಮಿಕಸ್ ವರದಿ ಒತ್ತಿಹೇಳಿರುವುದಾಗಿ ನ್ಯಾಯಾಲಯ ತಿಳಿಸಿತು.

Kannada Bar & Bench
kannada.barandbench.com