
ತನ್ನ ವಿಶಿಷ್ಟ ಆಕಾರ ಮತ್ತು ವಿನ್ಯಾಸ ನಕಲು ಮಾಡಿದ್ದಕ್ಕಾಗಿ ಭಾರತದ ಪಾದರಕ್ಷೆ ತಯಾರಕ ಕಂಪೆನಿಗಳ ವಿರುದ್ಧ ಅಮೆರಿಕದ ಚಪ್ಪಲಿ ತಯಾರಕ ಕಂಪೆನಿ ಕ್ರಾಕ್ಸ್ ಹೂಡಿದ್ದ ಮೊಕದ್ದಮೆಗಳನ್ನು ವಜಾಗೊಳಿಸಿ 2019ರಲ್ಲಿ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ರದ್ದುಗೊಳಿಸಿತು.
ಆ ಮೂಲಕ, ತನ್ನ ಫೋಮ್ ಕ್ಲಾಗ್‌ಗಳ ವಿಶಿಷ್ಟ ಆಕಾರ ಮತ್ತು ವಿನ್ಯಾಸವನ್ನು ನಕಲು ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹರಿಶಂಕರ್ ಮತ್ತು ಅಜಯ್ ದಿಗ್ಪಾಲ್ ಅವರಿದ್ದ ಪೀಠ ಪುನರಾರಂಭಿಸಿತು.
ಮತ್ತೆ ಮೊಕದ್ದಮೆಗಳನ್ನು ಏಕಸದಸ್ಯ ಪೀಠದ ಮುಂದೆ ಇರಿಸಬೇಕು, ಅವರು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ವಿಭಾಗೀಯ ಪೀಠ ಹೇಳಿದೆ. ಏಕಸದಸ್ಯ ಪೀಠದ ತೀರ್ಪು ತಪ್ಪು ಎಂದು ಕೂಡ ನ್ಯಾಯಾಲಯ ಇದೇ ವೇಳೆ ಹೇಳಿದೆ.
ಬಾಟಾ ಇಂಡಿಯಾ, ಲಿಬರ್ಟಿ ಶೂಸ್, ರಿಲ್ಯಾಕ್ಸೊ ಫುಟ್‌ವೇರ್, ಆಕ್ಷನ್ ಶೂಸ್, ಅಕ್ವಾಲೈಟ್ ಮತ್ತು ಬಯೋವರ್ಲ್ಡ್ ಮರ್ಚಂಡೈಸಿಂಗ್‌ನಂತಹ ಕಂಪನಿಗಳು ತನ್ನ ಕ್ಲಾಗ್‌ಗಳ ಆಕಾರ, ಸಂರಚನೆ ಮತ್ತು ರಂದ್ರ ವಿನ್ಯಾಸವನ್ನು ನಕಲು ಮಾಡಿವೆ ಎಂದು ಕ್ರೋಕ್ಸ್ ಹೇಳಿತ್ತು. ಕ್ರೋಕ್ಸ್‌ನ ವಿಶಿಷ್ಟ ರೂಪಕ್ಕೆ ʼಆಕಾರ ವಾಣಿಜ್ಯ ಚಿಹ್ನೆಯʼ ಮಾನ್ಯತೆ ಇದ್ದು ಹೀಗೆ ನಕಲು ಮಾಡಿರುವುದರಿಂದ ಗ್ರಾಹಕರು ದಾರಿ ತಪ್ಪುವಂತಾಗಿದ್ದು ಜಾಗತಿಕವಾಗಿ ರೂಪುಗೊಂಡಿರುವ ತನ್ನ ವರ್ಚಸ್ಸಿಗೆ ಧಕ್ಕೆ ಬಂದಿದೆ ಎಂದು ಕ್ರಾಕ್ಸ್ ದೂರಿದೆ.
ವಿಚಾರಣೆಗೆ ಅರ್ಹವಲ್ಲ ಎಂದು ಫೆಬ್ರವರಿ 18, 2019 ರಂದು ತೀರ್ಪು ನೀಡಿದ್ದ ದೆಹಲಿ ಹೈಕೋರ್ಟ್ ಏಕ ಸದಸ್ಯ ಪೀಠ ಪ್ರಾಥಮಿಕ ಹಂತದಲ್ಲಿಯೇ ಆರು ಮಧ್ಯಂತರ ಮೊಕದ್ದಮೆಗಳನ್ನು ವಜಾಗೊಳಿಸಿತ್ತು. ನೋಂದಾಯಿತ ವಿನ್ಯಾಸವಾಗಿ ಈಗಾಗಲೇ ರಕ್ಷಿಸಲ್ಪಟ್ಟ ಅದೇ ಉತ್ಪನ್ನಕ್ಕೆ ರಕ್ಷಣೆ ಒದಗಿಸಲು ಕ್ರಾಕ್ಸ್. ಪಾಸ್ ಆಫ್ ಅರ್ಜಿ (ಬೇರೊಂದು ಉತ್ಪನ್ನವನ್ನು ತಮ್ಮದೆಂದು ತಪ್ಪಾಗಿ ಬಿಂಬಿಸುವವರ ವಿರುದ್ಧ ಹೂಡಲಾಗುವ ದಾವೆ) ಸಲ್ಲಿಸುವಂತಿಲ್ಲ ಎಂದು ಅದು ಮುಖ್ಯವಾಗಿ ತರ್ಕಿಸಿತ್ತು.