ತಮ್ಮ ವಿರುದ್ಧ ಹಾಗೂ ತಮ್ಮ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ ವಿರುದ್ಧ ಸಿಬಿಐ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮಾನವ ಹಕ್ಕುಗಳ ಕಾರ್ಯಕರ್ತ, ಕೋಮು ಹಿಂಸಾಚಾರದ ವಿರುದ್ಧದ ಹೋರಾಟಗಾರ ಹರ್ಷ್ ಮಂದರ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸಿಬಿಐಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಸಿಬಿಐನಿಂದ ಸ್ಥಿತಿಗತಿ ವರದಿ ಕೇಳಿರುವ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಆಗಸ್ಟ್ 29ಕ್ಕೆ ಪ್ರಕರಣ ಮುಂದೂಡಿದ್ದಾರೆ.
ಮಂದರ್ ಅವರನ್ನು ಬಂಧಿಸುವುದಿಲ್ಲ ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅನುಪಮ್ ಎಸ್ ಶರ್ಮಾ ನ್ಯಾಯಾಲಯಕ್ಕೆ ತಿಳಿಸಿದರು. ಇದೇ ವೇಳೆ ಅವರು ಈ ಭರವಸೆಯನ್ನು ಆದೇಶದಲ್ಲಿ ದಾಖಲಿಸದೆ ಇರಲು ಮನವಿಯನ್ನೂ ಮಾಡಿದರು.
ಮಂದರ್ ಮತ್ತು ಸಿಇಎಸ್ ವಿರುದ್ಧ ಜನವರಿ 31, 2024ರಲ್ಲಿ ಎಫ್‌ಐಆರ್ ದಾಖಲಿಸಿದ್ದ ಸಿಬಿಐ, 2020-21ರ ಅವಧಿಯಲ್ಲಿ ಸಿಇಎಸ್ ಎಫ್‌ಸಿಆರ್‌ಎ ಉಲ್ಲಂಘಿಸಿ ವೇತನ ಹಾಗೂ ಸಂಭಾವನೆಯ ಹೊರತಾಗಿ ₹32.7 ಲಕ್ಷವನ್ನು ಎಫ್‌ಸಿಆರ್‌ಎ ಖಾತೆಯಿಂದ ವ್ಯಕ್ತಿಗಳಿಗೆ ವರ್ಗಾಯಿಸಿದೆ ಎಂದು ಆರೋಪಿಸಿತ್ತು
ಅಲ್ಲದೆ ಸಿಇಎಸ್ ತನ್ನ ಖಾತೆಯಿಂದ ₹10 ಲಕ್ಷ ಮೊತ್ತವನ್ನು ಎಫ್‌ಸಿಆರ್‌ಎ ಉಲ್ಲಂಘಿಸಿ ಸಂಸ್ಥೆಗಳ ಮೂಲಕ ಬದಲಿಸಿದೆ ಎಂದು ಕೂಡ ಆರೋಪಿಸಲಾಗಿತ್ತು.
ಮೊದಲ ಆರೋಪಕ್ಕೆ ಸಂಬಂಧಿಸಿದಂತೆ ತಾವು ಅಕ್ರಮ ಎಸಗಿರುವುದನ್ನು ಸಿಬಿಐ ಸಾಬೀತುಪಡಿಸಿಲ್ಲ ಮತ್ತು ಎರಡನೇ ಆರೋಪ ಅಸ್ಪಷ್ಟವಾಗಿದ್ದು ಅದು ಕ್ರಿಮಿನಲ್ ತನಿಖೆಗೆ ಆಧಾರವಾಗುವುದಿಲ್ಲ ಎಂದು ಸಿಇಎಸ್ ಮತ್ತು ಮಂದರ್ ವಾದಿಸಿದ್ದಾರೆ.
ಮಂದರ್ ಪರ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣ ವಾದ ಮಂಡಿಸಿದ್ದರು. ವಕೀಲ ಸರೀಮ್ ನಾವೇದ್ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.