ಆಧಾರ್ ಜೊತೆ ಆಸ್ತಿ ಜೋಡಣೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ಆಸ್ತಿ ದಾಖಲೆಗಳೊಂದಿಗೆ ಆಧಾರ್ ಜೋಡಿಸುವುದರಿಂದ ಭ್ರಷ್ಟಾಚಾರ, ಕಪ್ಪುಹಣ ಹಾಗೂ ಬೇನಾಮಿ ವಹಿವಾಟುಗಳನ್ನು ತಡೆಯಬಹುದು ಎಂದು ವಾದಿಸಿರುವ ಅಶ್ವಿನಿ ಉಪಾಧ್ಯಾಯ.
Aadhaar
Aadhaar

ಚರ ಮತ್ತು ಸ್ಥಿರಾಸ್ತಿ ದಾಖಲೆಗಳನ್ನು ಆಧಾರ್‌ನೊಂದಿಗೆ ಜೋಡಿಸುವಂತೆ ಒತ್ತಾಯಿಸಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್‌ ಸೋಮವಾರ ಹಣಕಾಸು ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿದ್ದ ವಿಭಾಗೀಯ ಪೀಠವು ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಪ್ರತಿಕ್ರಿಯೆಗಳನ್ನು ಕೂಡ ಕೇಳಿದೆ.

2019ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯ  ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡುವಂತೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉಪಾಧ್ಯಾಯ ಕೋರಿದ್ದರು.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದಾಗ ಉಪಾಧ್ಯಾಯ ಅವರ ಅರ್ಜಿಯಲ್ಲಿರುವ ದೋಷಗಳನ್ನು ಹೈಕೋರ್ಟ್‌ ರೆಜಿಸ್ಟ್ರಿ ಪ್ರಸ್ತಾಪಿಸಿದೆ ಎಂಬ ವಿಚಾರವನ್ನು ಪೀಠ ಗಮನಿಸಿತು. ಬಳಿಕ ದೋಷ ಸರಿಪಡಿಸಲು ಸೂಚಿಸಿದ ನ್ಯಾಯಾಲಯ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಆದೇಶಿಸಿತು.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ  ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಅವರು ಪ್ರಕರಣ ಪ್ರಮುಖವಾದುದಾಗಿದೆ ಎಂದು ಹೇಳಿದರು. ನ್ಯಾಯಾಲಯ  ಜುಲೈ 18, 2023ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ಆಸ್ತಿ ದಾಖಲೆಗಳೊಂದಿಗೆ ಆಧಾರ್ ಜೋಡಿಸುವುದರಿಂದ ಭ್ರಷ್ಟಾಚಾರ, ಕಪ್ಪುಹಣ ಹಾಗೂ ಬೇನಾಮಿ ವಹಿವಾಟುಗಳನ್ನು ತಡೆಯಬಹುದು ಎಂದು ಅಶ್ವಿನಿ ಉಪಾಧ್ಯಾಯ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com