ದೆಹಲಿಯ ಜಂತರ್ ಮಂತರ್‌ನಲ್ಲಿ ಪರಿಸರ ಹೋರಾಟಗಾರ, ಶಿಕ್ಷಣ ತಜ್ಞ ಹಾಗೂ ಚಿಂತಕ ಸೋನಮ್ ವಾಂಗ್‌ಚುಕ್ ಮತ್ತಿತರರು ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್ ಬುಧವಾರ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿದೆ.
ಅಕ್ಟೋಬರ್ 16 ರೊಳಗೆ ಮನವಿಗೆ ಪ್ರತಿಕ್ರಿಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ನ್ಯಾಯಮೂರ್ತಿಗಳಾದ ಪ್ರತಿಬಾ ಎಂ ಸಿಂಗ್ ಹಾಗೂ ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಅಕ್ಟೋಬರ್ 22ಕ್ಕೆ ವಿಚಾರಣೆ ಮುಂದೂಡಿತು. ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಮಾಡಲಾದ ಮನವಿ ಹಿನ್ನೆಲೆಯಲ್ಲಿ ಅದು ಇಂದು ವಿಚಾರಣೆ ಕೈಗೆತ್ತಿಕೊಂಡಿತ್ತು.
ಜಮ್ಮು ಕಾಶ್ಮೀರವನ್ನು 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ ಹಿನ್ನೆಲೆಯಲ್ಲಿ ಲಡಾಖ್ ಪ್ರದೇಶವನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಲು ವಾಂಗ್‌ಚುಕ್ ಹಾಗೂ ಅವರ ಬೆಂಬಲಿಗರು ಲೇಹ್‌ನಿಂದ ದೆಹಲಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಜಮ್ಮು ಕಾಶ್ಮೀರವನ್ನು 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ ಹಿನ್ನೆಲೆಯಲ್ಲಿ ಲಡಾಖ್ ಪ್ರದೇಶವನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಲು ರಾಷ್ಟ್ರ ರಾಜಧಾನಿಗೆ ಕಾಲ್ನಡಿಗೆಯಲ್ಲಿ ಬಂದ ವಾಂಗ್‌ಚುಕ್ ಮತ್ತಿತರರಿಗೆ ಅಕ್ಟೋಬರ್ 8 ರಿಂದ 23ರವರೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡುವಂತೆ ದೆಹಲಿ ಸರ್ಕಾರ ಮತ್ತು ಅಲ್ಲಿನ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಲಡಾಖ್ ಮೂಲದ 'ಅಪೆಕ್ಸ್ ಬಾಡಿ ಲೇಹ್ʼ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಸ್ಥಳೀಯರ ಹಕ್ಕು ಮತ್ತು ಅಸ್ಮಿತೆಯನ್ನು ಗುರುತಿಸಿ ಸಂರಕ್ಷಿಸುವುದಕ್ಕಾಗಿ ಬುಡಕಟ್ಟು ಪ್ರದೇಶಗಳಲ್ಲಿ ಸ್ವಾಯತ್ತ ಆಡಳಿತ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಂವಿಧಾನದ ಆರನೇ ಪರಿಚ್ಛೇದ ಅವಕಾಶ ಕಲ್ಪಿಸುತ್ತದೆ. ಪ್ರಸ್ತುತ, ಇದು ಈಶಾನ್ಯ ಭಾರತದ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂಗಳಿಗೆ ಮಾತ್ರ ಈ ಪರಿಚ್ಛೇದ ಅನ್ವಯವಾಗುತ್ತಿದೆ.
ಲಡಾಖ್‌ನ ಪರಿಸರ ರಕ್ಷಿಸುವಂತೆ ಈ ಹಿಂದೆ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕಳೆದ ತಿಂಗಳು ವಾಂಗ್‌ಚುಕ್ ಹಾಗೂ ಇತರರು ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದರು. ಆದರೆ ದೆಹಲಿ ಪ್ರವೇಶಿಸುವ ಮುನ್ನವೇ ಅವರನ್ನು ಅವರ ಬೆಂಬಲಿಗರ ಸಹಿತ ಬಂಧಿಸಿ ಬಿಡುಗಡೆ ಮಾಡಲಾಗಿತ್ತು.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಮಾಡಿದ್ದ ಮನವಿಯನ್ನು ಅಕ್ಟೋಬರ್ 5 ರಂದು ದೆಹಲಿ ಪೊಲೀಸರು ತಿರಸ್ಕರಿಸಿದ್ದರು.
ಇಂದಿನ ವಿಚಾರಣೆ ವೇಳೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿಯನ್ನು ತುರ್ತಾಗಿ ಆಲಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿರುವುದು ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಸಭೆ ಸೇರುವ ತನ್ನ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸಂಘಟನೆ ವಾದಿಸಿತು. ಇಡೀ ಪ್ರತಿಭಟನೆಯನ್ನೇ ಸಾರಾಸಗಟಾಗಿ ನಿರಾಕರಿಸುವ ಬದಲು ಬೇರೊಂದು ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಬಹುದಿತ್ತು ಎಂದು ವಿವರಿಸಿತು.