ದೆಹಲಿಯ ಸ್ಮಶಾನದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ 9 ವರ್ಷದ ದಲಿತ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್, ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದೆ. ಪ್ರಕರಣದ ವಿಚಾರಣೆ ಡಿಸೆಂಬರ್ 21ರಂದು ನಡೆಯಲಿದೆ.
ಮೃತ ಬಾಲಕಿಯ ಪೋಷಕರ ಛಾಯಾಚಿತ್ರಗಳನ್ನು ಹೊಂದಿದ್ದ ರಾಹುಲ್ ಗಾಂಧಿ ಅವರ ಟ್ವೀಟ್‌ಗಳಿಗೆ ಆಕ್ಷೇಪಿಸಿ ಸಾಮಾಜಿಕ ಕಾರ್ಯಕರ್ತ ಮಕರಂದ್ ಸುರೇಶ್ ಮಡ್ಲೇಕರ್ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಛಾಯಾಚಿತ್ರಗಳು ಸಂತ್ರಸ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ್ದು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ (ಜೆಜೆ ಕಾಯಿದೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ- 2012ರ (ಪೋಕ್ಸೊ ಕಾಯಿದೆ) ಉಲ್ಲಂಘನೆಯಾಗಿದೆ ಎಂದು ಮಡ್ಲೇಕರ್ ದೂರಿದ್ದರು.
ಬಾಲಾಪರಾಧ ನ್ಯಾಯ ಕಾಯಿದೆಯ ಸೆಕ್ಷನ್ 74 ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 23 (2) ಪ್ರಕಾರ, ಸಂತ್ರಸ್ತೆ ಅಥವಾ ಆಕೆಯ ಕುಟುಂಬ ಸದಸ್ಯರ ಗುರುತನ್ನು ಬಹಿರಂಗಪಡಿಸಬಾರದು ಎಂದು ಆದೇಶವಿದೆ
ಇಂದು, ಅರ್ಜಿದಾರರ ಪರವಾಗಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾನಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಪರವಾಗಿ ಹಾಜರಾದ ವಕೀಲರು ಈ ಘಟನೆ ಸುಮಾರು ಮೂರು ವರ್ಷಗಳ ಹಿಂದೆ ನಡೆದಿದ್ದರೂ, ದೆಹಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಬೇಕು ಎಂದು ಎನ್‌ಸಿಪಿಸಿಆರ್ ಪರ ವಕೀಲರು ವಾದಿಸಿದರು. ಏತನ್ಮಧ್ಯೆ, ರಾಹುಲ್ ಗಾಂಧಿ ಪರ ಹಾಜರಾದ ವಕೀಲ ತರನ್ನುಮ್ ಚೀಮಾ, ನ್ಯಾಯಾಲಯ ಅವರಿಗೆ ಔಪಚಾರಿಕ ನೋಟಿಸ್ ನೀಡಿಲ್ಲ ಎಂದು ತಿಳಿಸಿದರು.
ಮೊದಲು ದೆಹಲಿ ಪೊಲೀಸರ ಸ್ಥಿತಿಗತಿ ವರದಿಯನ್ನು ಪರಿಶೀಲಿಸಿ ನಂತರ ಏನು ಮಾಡಬೇಕೆಂದು ನಿರ್ಧರಿಸುವುದಾಗಿ ನ್ಯಾಯಪೀಠ ಹೇಳಿತು.
ದೆಹಲಿಯ ಪುರಾನಾ ನಂಗಲ್ ಪ್ರದೇಶದ ಸ್ಮಶಾನದಲ್ಲಿ ಸ್ಥಾಪಿಸಲಾದ ಕೂಲರ್ನಲ್ಲಿ ನೀರು ತರಲು ಹೋಗಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿತ್ತು.
ದೆಹಲಿಯ ಪುರಾನಾ ನಂಗಲ್ ಪ್ರದೇಶದ ಸ್ಮಶಾನದಲ್ಲಿ ಸ್ಥಾಪಿಸಲಾದ ಕೂಲರ್ನಲ್ಲಿ ನೀರು ತರಲು ಹೋಗಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಬಾಲಕಿಯ ಪೋಷಕರನ್ನು ಭೇಟಿಯಾದ ರಾಹುಲ್ ಅವರನ್ನು ಸಂತೈಸುತ್ತಿರುವ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಪರಿಗಣಿಸಿದ ಎನ್‌ಸಿಪಿಸಿಆರ್ ಕುಟುಂಬ ಸದಸ್ಯರ ಬಗ್ಗೆ ಸೂಕ್ಷ್ಮ ಮಾಹಿತಿ ಒಳಗೊಂಡಿರುವ ಟ್ವೀಟ್‌ಗಳನ್ನು ತೆಗದುಹಾಕುವಂತೆ ಟ್ವಿಟರ್‌ಗೆ ನಿರ್ದೇಶನ ನೀಡಿತ್ತು. ರಾಹುಲ್ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿತ್ತು. ನಂತರ ಖಾತೆಯನ್ನು ಪುನರ್‌ಸ್ಥಾಪಿಸಲಾಗಿತ್ತಾದರೂ ಟ್ವೀಟನ್ನು ಭಾರತದಲ್ಲಿ ತಡೆ ಹಿಡಿಯಲಾಗಿತ್ತು. .