
ಕಳೆದ ವರ್ಷ ರಾಷ್ಟ್ರಪತಿಗಳ ಅಂಕಿತ ದೊರೆತ ಮಹಿಳಾ ಮೀಸಲಾತಿ ಕಾಯಿದೆಯಡಿಯಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೌಲಭ್ಯವನ್ನು ಕ್ಷೇತ್ರ ಮರುವಿಂಗಡಣೆಯ ನಂತರವೇ ಜಾರಿಗೆ ತರಬೇಕು ಎಂದು ಷರತ್ತು ವಿಧಿಸುವ ಸಂವಿಧಾನದ 334ಎ ವಿಧಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಲೋಕಸಭೆ, ರಾಜ್ಯ ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಗಿಯುವವರೆಗೆ ಮಹಿಳಾ ಮೀಸಲಾತಿಯನ್ನು ಏಕೆ ತಡೆಹಿಡಿಯಲಾಗಿದೆ ಎಂದು ಪ್ರಶ್ನಿಸಿರುವ ಅರ್ಜಿ ಕುರಿತಂತೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಕೇಂದ್ರ ಸರ್ಕಾರ ಮತ್ತು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಪ್ರತಿಕ್ರಿಯೆ ಕೇಳಿತು.
"ಸಂವಿಧಾನದ 334ಎ ವಿಧಿಯನ್ನು ಪ್ರಶ್ನಿಸಲಾಗಿರುವುದರಿಂದ, ಅಟಾರ್ನಿ ಜನರಲ್ ಅವರಿಗೆ ನೋಟಿಸ್ ನೀಡಬೇಕು" ಎಂದು ನ್ಯಾಯಾಲಯ ಹೇಳಿದೆ.
ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದಕ್ಕಾಗಿ 2023 ರಲ್ಲಿ ವಿವಿಧ ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಲಾಯಿತು. ಬಳಿಕ ಸಂವಿಧಾನ (ನೂರ ಆರನೇ ತಿದ್ದುಪಡಿ) ಕಾಯಿದೆ- 2023 ಎಂದು ಅದು ಹೆಸರಾಯಿತು.
ಸಂವಿಧಾನಕ್ಕೆ ಈ ಕಾಯಿದೆ ಅನೇಕ ಹೊಸ ವಿಧಿಗಳನ್ನು ಸೇರಿಸಿದ್ದು ಇದರಿಂದಾಗಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಯಿತು.
ಆದರೆ ಹೊಸದಾಗಿ ಪರಿಚಯಿಸಲಾಗಿರುವ ವಿಧಿಗಳಲ್ಲಿ ಒಂದಾದ 334ಎ ಪ್ರಕಾರ, 2023 ರ ಕಾಯಿದೆ ಜಾರಿಗೆ ಬಂದ ನಂತರ ನಡೆಯುವ ಮೊದಲ ಜನಗಣತಿ ಅಂಕಿ ಅಂಶಗಳನ್ನು ಆಧರಿಸಿ ಜರುಗಲಿರುವ ಕ್ಷೇತ್ರ ಪುನರ್ ವಿಂಗಡಣೆ ಬಳಿಕವೇ ಮಹಿಳಾ ಮೀಸಲಾತಿ ಜಾರಿಗೆ ಬರುತ್ತದೆ.
ಕಾಯಿದೆಗೆ ಸೆಪ್ಟೆಂಬರ್ 2023ರಲ್ಲಿ ರಾಷ್ಟ್ರಪತಿಗಳ ಅಂಕಿತ ದೊರೆತಿದ್ದರೂ , ಇನ್ನೂ ಜನಗಣತಿ ನಡೆಸದೆ ಇರುವುದರಿಂದ ಮಹಿಳಾ ಮೀಸಲಾತಿ ಇನ್ನೂ ಜಾರಿಗೆ ಬಂದಿಲ್ಲ. ಹೀಗಾಗಿ 334ಎ ವಿಧಿಯನ್ನು ಪ್ರಶ್ನಿಸಿ ರಾಷ್ಟ್ರೀಯ ಮಹಿಳಾ ಒಕ್ಕೂಟ ಪ್ರಸ್ತುತ ಅರ್ಜಿ ಸಲ್ಲಿಸಿದೆ.
ಇಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್ , 334ಎ ವಿಧಿಯು ಮಹಿಳಾ ಮೀಸಲಾತಿಯನ್ನು ಹತ್ತಿಕ್ಕುವ ಸಾಧನವಾಗಿದೆ ಎಂದು ಆಕ್ಷೇಪಿಸಿದರು. ಕ್ಷೇತ್ರ ಮರುವಿಂಗಡಣೆಗೂ ಮೀಸಲಾತಿಗೂ ಯಾವುದೇ ಸಂಬಂಧ ಇಲ್ಲ. ಈ ವಿಧಿ ಮನಸೋ ಇಚ್ಛೆಯಿಂದ ರೂಪಿತವಾಗಿದ್ದು ಜನಗಣತಿ ನಂತರ ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಆ ಬಳಿಕ ಮೀಸಲಾತಿ ಒದಗಿಸುವುದು ಅನಿಶ್ಚಿತವಾದುದು ಎಂದರು.
ಅರ್ಜಿದಾರರು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಕೆಲ ತಾಂತ್ರಿಕ ಮಾರ್ಪಾಡುಗಳನ್ನು ಮಾಡುವಂತೆ ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ ಸೂಚಿಸಿತು. ಇದಕ್ಕೆ ಅರ್ಜಿದಾರರು ಸಮ್ಮತಿಸಿದರು. ನಂತರ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.